ಜಿಲ್ಲೆ

ಚಟುವಟಿಕೆಗಳ ಸ್ಪಷ್ಟ ಚಿತ್ರಣ ಅಲಭ್ಯ

ಕಾರವಾರ: ಮೇ 4ರಿಂದ ಮೂರನೇ ಹಂತದ ಕರೊನಾ ಲಾಕ್​ಡೌನ್ ಪ್ರಾರಂಭವಾಗಿದೆ. ಕರೊನಾ ಮುಕ್ತವಾಗಿದ್ದರೂ ಜಿಲ್ಲೆಯನ್ನು ಸರ್ಕಾರ ಹಸಿರು ವಲಯ ಎಂದು ಘೊಷಿಸಿಲ್ಲ. ಕಿತ್ತಳೆ ವಲಯದಲ್ಲೇ ಮುಂದುವರಿಸಿದೆ. ಇಲ್ಲಿ ಸೋಮವಾರದಿಂದ ಯಾವ್ಯಾವ ಚಟುವಟಿಕೆಗಳು ಪ್ರಾರಂಭವಾಗಲಿವೆ ಎಂಬ ಸ್ಪಷ್ಟ ಚಿತ್ರಣ ಇನ್ನೂ ಲಭ್ಯವಾಗಿಲ್ಲ.

ಜಿಲ್ಲಾಡಳಿತ ನಿಯಮಗಳ ಅಧಿಕೃತ ಘೊಷಣೆಗಾಗಿ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ಆದೇಶಕ್ಕೆ ಕಾಯುತ್ತಿದೆ. ಮೇ 4 ರಂದು ಹೆಬ್ಬಾರ ಅವರು ಈ ಕುರಿತು ಸ್ಪಷ್ಟನೆ ನೀಡುವ ಸಾಧ್ಯತೆ ಇದೆ.

ಬೇರೆ ಜಿಲ್ಲೆಗಳಿಗೆ ಉದ್ಯೋಗಕ್ಕೆ ತೆರಳುವವರಿಗೆ ಪಾಸ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಜಿಲ್ಲೆಯೊಳಗೆ ಪ್ರವಾಸ ಮಾಡುವವರಿಗೆ ಪಾಸ್ ಬೇಕೇ ಬೇಡವೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆಟೋ ರಿಕ್ಷಾ, ಬಾಡಿಗೆ ಕಾರು, ಟೆಂಪೊ ಮುಂತಾದ ವಾಹನ ಸಂಚಾರಕ್ಕೆ ಅವಕಾಶ ನೀಡುವ ಬಗ್ಗೆಯೂ ಜಿಲ್ಲಾಡಳಿತ ಯಾವುದೇ ಸ್ಪಷ್ಟತೆ ನೀಡಿಲ್ಲ.

ಎಲ್ಲ ಅಂಗಡಿಗಳಿಗೂ ಅವಕಾಶವಿಲ್ಲ: ತರಕಾರಿ, ಹಣ್ಣು ಹಂಪಲು, ದಿನಸಿ ಮನೆ ಮನೆ ಮಾರಾಟ ವ್ಯವಸ್ಥೆ ಮುಂದುವರಿಯಲಿದೆ. ಔಷಧ, ಹಾಲಿನ ಅಂಗಡಿಗಳು, ಕಿರಾಣಿ, ಸ್ಟೇಷನರಿ, ಡ್ರೖೆ ಪ್ರೂಟ್ಸ್, ರಿಪೇರಿ ಅಂಗಡಿಗಳನ್ನು ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ. ಬಟ್ಟೆ, ಆಭರಣ, ಇಲೆಕ್ಟ್ರಿಕಲ್ ಅಂಗಡಿ, ಶೋರೂಂ ಗಳನ್ನು ಯಾವುದೇ ಕಾರಣಕ್ಕೂ ತೆರೆಯಬಾರದು ಎಂದು ಕಾರವಾರ ನಗರಸಭೆ ಮೈಕ್​ಗಳಲ್ಲಿ ಪ್ರಚಾರ ಪ್ರಾರಂಭಿಸಿದೆ.

ವೈನ್ ಶಾಪ್​ಗಳು ಪ್ರಾರಂಭ: ಜಿಲ್ಲೆಯ 76 ಸಿಎಲ್2 ಲೈಸಸ್ಸ್ ಹೊಂದಿದ ವೈನ್ ಶಾಪ್​ಗಳು, 16 ಎಂಎಸ್​ಐಎಲ್ ಮಳಿಗೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಆರ್. ಮೋಹನ್ ತಿಳಿಸಿದ್ದಾರೆ. ಬೆಳಗ್ಗೆ 9 ರಿಂದ ಸಾಯಂಕಾಲ 7 ರವರೆಗೆ ಮಾತ್ರ ಪರಸ್ಪರ ಅಂತರ ಕಾಯ್ದುಕೊಂಡು ಮದ್ಯ ಮಾರಾಟ ಮಾಡಲು ಅವಕಾಶವಿದೆ. ಸ್ಥಳದಲ್ಲೇ ಕುಡಿಯಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ ಎಂದು ಅವರು ವಿವರಿಸಿದ್ದಾರೆ.

ಬಸ್ ಇಂದಿನಿಂದ ಅನುಮಾನ: ಎನ್​ಡಬ್ಲ್ಯುಕೆಆರ್​ಟಿಸಿ ಶಿರಸಿ ವಿಭಾಗ ಎಲ್ಲ ಚಾಲಕರು, ನಿರ್ವಾಹಕರು ಹಾಗೂ ತಂತ್ರಜ್ಞರಿಗೆ ಕೆಲಸಕ್ಕೆ ಹಾಜರಾಗಲು ಸೂಚಿಸಿದೆ. ಸೋಮವಾರ ಬೆಳಗ್ಗೆ ನೌಕರರ ಆರೋಗ್ಯ ತಪಾಸಣೆ ನಡೆಯಲಿದೆ. ಆದರೆ, ಜಿಲ್ಲಾಧಿಕಾರಿ ಹಾಗೂ ನಿಗಮದ ಕೇಂದ್ರ ಕಚೇರಿಯಿಂದ ಅನುಮತಿ ಬೇಕಿದ್ದು, ಸೋಮವಾರದಿಂದ ಬಸ್​ಗಳ ಓಡಾಟ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುವುದು ಅನುಮಾನ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗಡೆ ತಿಳಿಸಿದ್ದಾರೆ. ಭಟ್ಕಳ ಹೊರತುಪಡಿಸಿ ಉಳಿದೆಡೆ ಮಾತ್ರ ಸ್ಥಳೀಯ ಓಡಾಟಕ್ಕೆ ಮಾತ್ರ ಬಸ್​ಗಳನ್ನು ಓಡಿಸುವ ಸಾಧ್ಯತೆ ಇದೆ.

ಭಟ್ಕಳದಲ್ಲಿ ಯಥಾ ಸ್ಥಿತಿ ಮುಂದುವರಿಕೆ: ಭಟ್ಕಳದಲ್ಲಿ ಲಾಕ್​ಡೌನ್ ಸಡಿಲಿಕೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.ತಿಳಿಸಿದ್ದಾರೆ. ಭಟ್ಕಳ ಪಟ್ಟಣಕ್ಕೆ ನಾಗರಿಕರು ಬರುವುದನ್ನು ನಿರ್ಬಂಧಿಸಲಾಗಿದೆ. ಅಗತ್ಯ ವಸ್ತುಗಳ ಮನೆ, ಮನೆ ಪೂರೈಕೆ ಎಂದಿನಂತೆ ಮುಂದುವರಿಯಲಿವೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರ ಕಿತ್ತಳೆ ವಲಯಕ್ಕೆ ಘೊಷಿಸಿದ ನಿಯಮಾವಳಿಯಂತೆ ಮೇ 4 ರಿಂದ ಜಿಲ್ಲೆಯಲ್ಲಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಹೆಚ್ಚಿನ ವಿವರಗಳನ್ನು ಉಸ್ತುವಾರಿ ಸಚಿವರು ಪ್ರಕಟಿಸಲಿದ್ದಾರೆ. ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ