ಬಾಗಲಕೋಟೆ ನವನಗರದ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೂರು ದಿನಗಳ ಕಾಲ ಜಿಲ್ಲಾ ಹಂತದ ಕಲಿಕಾ ಹಬ್ಬದ ತರಬೇತಿ ಕಾರ್ಯಾಗಾರಕ್ಕೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ವಿರೇಶ ಜೇವರಗಿ ಚಾಲನೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಾವಿತ್ರಿ ಕೊಂಡಗೋಳಿ, ಡಿವೈಪಿಸಿಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಜಾಸ್ಮೀನ್ ಕಿಲ್ಲೇದಾರ, ಎಸ್.ಎಸ್.ಕೆ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಸಿ.ಆರ್.ಓಣಿ, ಎಸ್.ಎಸ್.ಕೆ ಜಿಲ್ಲಾ ಯೋಜನಾ ಸಹಾಯಕರಾದ ಎಸ್.ಕೆ.ಕಲ್ಲೂರ, ಪಿ.ಎಸ್.ಚವ್ಹಾಣ, ಆದರ್ಶ ವಿದ್ಯಾಲಯದ ಮುಖ್ಯೋಪಾದ್ಯಾಯ ಆರ್.ಎಂ.ಮಕಾನದಾರ ಇತರರು ಉಪಸ್ಥಿತರಿದ್ದರು.  
ಜಿಲ್ಲೆ

ಚಟುವಟಿಕೆ ಆಧಾರಿತ ಕಲಿಕೆ ಅಗತ್ಯ

ಬಾಗಲಕೋಟೆ: ಮಕ್ಕಳಲ್ಲಿ ಇರುವ ಕಲಿಕಾ ಕೊರತೆಯನ್ನು ತುಂಬುವ ಉದ್ದೇಶದಿಂದ ಸರ್ಕಾರ ಕಲಿಕಾ ಹಬ್ಬವನ್ನು ರೂಪಿಸಿದ್ದು, ಚಟುವಟಿಕೆ ಆಧಾರಿತ ಕಲಿಕೆ ಕೈಗೊಳ್ಳಬೇಕಾಗಿದೆ. ಮೂರು ತಿಂಗಳುಗಳ ಕಾಲ ಮಕ್ಕಳ ಮನಸ್ಸನ್ನು ಕಲಿಕಾದತ್ತ ಕೊಂಡೊಯ್ಯುವ ಕಾರ್ಯವಾಗಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ವಿರೇಶ ಜೇವರಗಿ ಹೇಳಿದರು.
ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಯೋಜನಾ ಸಮನ್ವಯಾಽಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ನವನಗರದ ಆದರ್ಶ ವಿದ್ಯಾಲಯದಲ್ಲಿ ಗುರುವಾರದಿಂದ ಹಮ್ಮಿಕೊಂಡಿರುವ ಮೂರು ದಿನಗಳ ಕಾಲ ಜಿಲ್ಲಾ ಹಂತದ ಕಲಿಕಾ ಹಬ್ಬದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಲ್ಲಿಯ ಕಲಿಕಾ ಕೊರತೆ ನಿವಾರಿಸಲು ಉತ್ತೇಜನ ನೀಡಿ ವಿದ್ಯಾರ್ಥಿಗಳನ್ನು ಸಂತಸಗೊಳಿಸಬೇಕು. ಇಂದಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಪ್ರಶ್ನೆ ಮಾಡುವಂತಾಗಬೇಕು. ಕಲಿಕೆಯ ಕೊರತೆ ತುಂಬಿ ಕಲಿಕೆಯಿಂದ ಹಿಂಜರಿಕೆ ಹೋಗಲಾಡಿಸಬೇಕಾಗಿದೆ. ಚಟುವಟಿಕೆಗಳ ಮೂಲಕ ಸಂತೋಷದಿಂದ ಪಾಲ್ಗೊಳ್ಳುವಂತೆ ಮಾಡಿ ಸೂಕ್ತ ಪ್ರತಿಭೆಯನ್ನು ಹೊರತರುವಂತಹ ಕೆಲಸವಾಗಬೇಕು ಎಂದರು.
ಎಸ್.ಎಸ್.ಕೆ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಸಿ.ಆರ್.ಓಣಿ ಮಾತನಾಡಿ, ಮಕ್ಕಳಲ್ಲಿನ ಸಂತೋಷವನ್ನು ಇಮ್ಮಡಿಗೊಳಿಸುವ ಕಾರ್ಯಕ್ರಮವೇ ಕಲಿಕಾ ಹಬ್ಬವಾಗಿದ್ದು, ತರಬೇತಿ ಪಡೆಯಲು ಬಂದವರು ಧನಾತ್ಮಕವಾದ ಭಾವನೆ ಇಟ್ಟುಕೊಂಡು ಮಕ್ಕಳಿಗೆ ಕಲಿಕೆ ನೀಡುವಂತಾಗಬೇಕು. ತಮ್ಮಲ್ಲಿರುವ ಕಲಿಕಾ ಶಕ್ತಿಯಿಚಿದ ಮಕ್ಕಳ ಮನಸ್ಸನ್ನು ಗೆಲ್ಲುವ ಕಾರ್ಯ ವರ್ಗದ ಕೋಣೆಗಳಲ್ಲಿ ಸೃಷ್ಠಿಯಾಗಬೇಕು ಎಂದು ತಿಳಿಸಿದರು.
ಡಿವೈಪಿಸಿಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಜಾಸ್ಮೀನ್ ಕಿಲ್ಲೇದಾರ ಮಾತನಾಡಿ, ತರಬೇತಿ ಪಡೆಯಲು ಬಂದವರು ಕಲಿಕಾ ಹಬ್ಬದ ರಾಯಬಾರಿಗಳಾಗಿದ್ದು, ಗೈರು ಹಾಜರಾಗದೇ ಮೂರು ದಿನಗಳ ಕಾಲ ತರಬೇತಿ ಪಡೆದುಕೊಳ್ಳಬೇಕು. ಜಿಲ್ಲಾ ಹಂತದಲ್ಲಿ ತರಬೇತಿ ಪಡೆದು ಆಯಾ ತಾಲೂಕಿನ ಕ್ಲಸ್ಟರ ಮಟ್ಟದಲ್ಲಿ ತರಬೇತಿ ನೀಡಬೇಕಾಗಿದೆ. ಮಕ್ಕಳಲ್ಲಿ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸುವ ಕಾರ್ಯ ಮಾಡುವ ಮೂಲಕ ಕಲಿಕಾ ಹಬ್ಬದ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು. ಅದಕ್ಕಾಗಿ ೫ ಜನ ರಾಜ್ಯ ಮಟ್ಟದಲ್ಲಿ ತರಬೇತಿ ಪಡೆದುಕೊಂಡವರು ಜಿಲ್ಲಾ ಹಂತದ ತರಬೇತಿ ನೀಡಲು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದಾರೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಾವಿತ್ರಿ ಕೊಂಡಗೋಳಿ ಮಾತನಾಡಿ, ಕಲಿಕಾ ಹಬ್ಬ ಸಂಭ್ರಮದ ಹಬ್ಬವಾಗಿ ಪರಿಣಮಿಸಬೇಕು. ಮಾನಸಿಕವಾಗಿ, ದೈಹಿಕವಾಗಿ ತರಬೇತಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ತರಬೇತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಪೂರ್ಣವಾಗಿ ತಯಾರಾಗಬೇಕು. ಅಂದಾಗ ಮಾತ್ರ ಕಲಿಕಾ ಹಬ್ಬ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಕೆ ಜಿಲ್ಲಾ ಯೋಜನಾ ಸಹಾಯಕರಾದ ಎಸ್.ಕೆ.ಕಲ್ಲೂರ, ಪಿ.ಎಸ್.ಚವ್ಹಾಣ, ಆದರ್ಶ ವಿದ್ಯಾಲಯದ ಮುಖ್ಯೋಪಾದ್ಯಾಯ ಆರ್.ಎಂ.ಮಕಾನದಾರ, ಸಂಪನ್ಮೂಲ ವ್ಯಕ್ತಿಗಳಾದ ಬಸಪ್ಪ, ಕಲ್ಲಗೂಡಿ, ಮ್ಯಾಗಿನಮನಿ, ರವಿ ಕಂಗಳ ಸೇರಿದಂತೆ ಇತರರು ಉಪಸ್ಥಿತರಿದ್ದರು.