ಶ್ರೀರಂಗಪಟ್ಟಣ: ಬನ್ನಿ ದಳದ ಎಲೆ ಮನುಷ್ಯನ ಬದುಕಿಗೆ ಬಂಗಾರದ ನೆಲೆ ಕಲ್ಪಿಸಲು ಸಹಕಾರಿಯಾಗಿದೆ. ನವರಾತ್ರಿಯಲ್ಲಿ ದುರ್ಗಾದೇವಿಯನ್ನು ಪರಿಪೂರ್ಣ ಮನಸ್ಸಿಂದ ಆರಾಧಿಸಿ ಸಮೃದ್ಧಿ ಕಾಯ್ದುಕೊಳ್ಳಿ ಎಂದು ಚಂದ್ರವನ ಮಠದ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.
ಪಟ್ಟಣ ಹೊರವಲಯದ ಚಂದ್ರವನ ಆಶ್ರಮದ ಆವರಣದಲ್ಲಿ ಗುರುವಾರ ವಿಜಯದಶಮಿಯ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಹದ ಮಲಿನ ತೊಳೆಯಲು ನೀರು ಬೇಕು. ಮನಸ್ಸಿನ ದುಗುಡ ಕಳೆಯಲು ಅಳವಾದ ಧ್ಯಾನಬೇಕು. ಧರ್ಮ ನಮ್ಮನ್ನು ಶಾಂತಿ, ಸನ್ನಡತೆ ಹಾಗೂ ಸನ್ಮಾರ್ಗದಲ್ಲಿ ಕೊಂಡೊಯ್ಯಲು ಸಹಕಾರಿಯಾಗಿದೆ. ನವರಾತ್ರಿಯ ಪ್ರತಿಯೊಂದು ದಿನಗಳು ಶ್ರೀ ಪಾರ್ವತಿ ದೇವಿಯ ಹಲವು ಅವತಾರಗಳಿಗೆ ಸಾಕ್ಷಿಯಾಗಿದೆ. ಇಂತಹ ಸಮಯದಲ್ಲಿ ಸ್ತ್ರೀಯರು ತಮ್ಮ ಕುಟುಂಬಗಳ ಏಳಿಗೆಗೆ ಶಕ್ತಿದೇವಿಯಲ್ಲಿ ಅನುಷ್ಠಾನ ಕೈಗೊಳ್ಳಿ ಎಂದರು.
ನವಗ್ರಹ ಪೂಜಾ ಕಾರ್ಯಕ್ರಮ, ಫಲಪ್ರದಾಯಿನಿ ಪೂಜೆ, ಗಣಪತಿ ಹೋಮ, ಯಾಗಶಾಲದಲ್ಲಿ ಅಷ್ಟಲಕ್ಷ್ಮೀ ಆರಾಧನೆ, ಕುಂಕುಮಾರ್ಚನೆ, ಗೋಧೂಳಿ ಲಗ್ನದಲ್ಲಿ ದುರ್ಗದೇವಿ ಆರಾಧನೆ ಹಾಗೂ ಆವರಣದಲ್ಲಿ ರಥೋತ್ಸವ ನೆರವೇರಿಸಲಾಯಿತು. ಬಳಿಕ ವೀರಗಾಸೆಯೊಂದಿಗೆ ವೀರಭದ್ರ ಕುಣಿತ ನೆರೆವೇರಿಸಿ ಗುರುಗಳ ಪಾದಪೂಜೆ ಸಲ್ಲಿಸಲಾಯಿತು. ಬನ್ನಿಪೂಜೆಯೊಂದಿಗೆ ಬನ್ನಿವೃಕ್ಷ ಛೇದನ ನೆರವೇರಿಸಿ ಭಕ್ತರಿಗೆ ವಿತರಿಸಲಾಯಿತು.
ಡಾ.ಭಾನುಪ್ರಕಾಶ್ ಶರ್ಮಾ, ಮೂಗೂರು ಮಧು ದೀಕ್ಷಿತ್, ಬೆಂಗಳೂರಿನ ಆರ್.ಟಿ.ಒ ತನಿಖಾಧಿಕಾರಿ ಶಾಲಿನಿ ಷಣ್ಮುಖ ಹಡಗದ್, ಪುರಸಭೆ ಸದಸ್ಯ ಗಂಜಾಂ ಕೃಷ್ಣಪ್ಪ ಉಪಸ್ಥಿತರಿದ್ದರು.