ವಿಜಯವಾಣಿ ಸುದ್ದಿಜಾಲ ಧಾರವಾಡ
ಕಳೆದ ತಿಂಗಳು ಉಡಾವಣೆಯಾದ ಚಂದ್ರಯಾನ-3 ನೌಕೆಯು ಬುಧವಾರ ಸಂಜೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವ ಕಾರ್ಯಾಚರಣೆಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಆರಂಭಿಸಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಭಾರತ ಮಾತ್ರವಲ್ಲದೆ, ಇಡೀ ವಿಶ್ವವೇ ಎದುರು ನೋಡುತ್ತಿದೆ.
ಚಂದ್ರಯಾನ-3 ಮಿಷನ್‌ನ ಯಶಸ್ಸಿಗಾಗಿ ದೇಶಾದ್ಯಂತ ಭಕ್ತರು ವಿಶೇಷ ಪ್ರಾರ್ಥನೆಗಳನ್ನು ನಡೆಸುತ್ತಿದ್ದಾರೆ. ಅದೇ ರೀತಿ ನಗರದಲ್ಲಿ ವಿದ್ಯಾರ್ಥಿಗಳು ಹಾಗೂ ನಮ್ಮ ಮಿತ್ರ ಮಂಡಳಿ ವತಿಯಿಂದ ಇಲ್ಲಿನ ಕೆಸಿಡಿ ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ವಿಕ್ರಂ ಲ್ಯಾಂಡರ್ ಚಂದ್ರಯಾನ-3 ಯಶಸ್ವಿಯಾಗಲಿ ಎಂಬ ಭಿತ್ತಿಪತ್ರ ಹಾಗೂ ರಾಷ್ಟ್ರ ಧ್ವಜಗಳನ್ನು ಪ್ರದರ್ಶಿಸಿ ವಿಜ್ಞಾನಿಗಳಿಗೆ ಶುಭ ಹಾರೈಸಿದರು. ಇನ್ನು ಕಲಾವಿದ ಮಂಜುನಾಥ ಹಿರೇಮಠ ಅವರು ಥರ್ಮೋಕೋಲ್‌ನಲ್ಲಿ ಚಂದ್ರಯಾನ-3ಯನ್ನು ಸಿದ್ಧಪಡಿಸುವ ಮೂಲಕ ವಿಶೇಷವಾಗಿ ಇಸ್ರೋ ವಿಜ್ಞಾನಿಗಳಿಗೆ ಶುಭ ಹಾರೈಸಿದ್ದು ಎಲ್ಲರ ಗಮನ ಸೆಳೆಯಿತು. ನಂತರ ಸಿಹಿ ಹಂಚಲಾಯಿತು.
ವಿನಾಯಕ ಜೋಶಿ, ಸುನೀಲ ಬಾಗೇವಾಡಿ, ಅರುಣ ಶೀಲವಂತರ, ರಮೇಶ ಉಳ್ಳಾಗಡ್ಡಿ, ಎಂ.ಎನ್. ಶೂರ್ಪಾಲಿ, ಅರವಿಂದ ಕುಲಕರ್ಣಿ, ಆಶಾ ಜೋಶಿ, ಮಹಾಂತೇಶ, ಡಾ. ಅಚ್ಯುತ, ರಾಜು ಕುಲಕರ್ಣಿ, ಎಂ.ಎನ್. ಪಾಟೀಲ, ಪ್ರಾಭಕರ ಗದರೆ, ವಿದ್ಯಾರ್ಥಿಗಳು, ಇತರರು ಇದ್ದರು.