ಕೋಲಾರಮ್ಮ ದೇವಿಗೆ ವಿಶೇಷ ಪೂಜೆಗಾಗಿ ಫಲಪುಷ್ಪ ಅರ್ಪಿಸಿದ ಸಂಸದ ಎಸ್.ಮುನಿಸ್ವಾಮಿ.  
ಜಿಲ್ಲೆ

ಚಂದ್ರಯಾನ ಯಶಸ್ಸಿಗಾಗಿ ಕೋಲಾರಮ್ಮಗೆ ಮೊರೆ

ಕೋಲಾರ: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಚಂದ್ರಯಾನ ೩ ನೌಕೆ ವಿಕ್ರಂ ಚಂದ್ರನ ಮೇಲೆ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಲೆಂದು ಪ್ರಾರ್ಥಿಸಿ ಸಂಸದ ಎಸ್.ಮುನಿಸ್ವಾಮಿ ನಗರದೇವತೆ ಶ್ರೀ ಕೋಲಾರಮ್ಮಗೆ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು.
ಬಿಜೆಪಿಯ ನೂರಾರು ಕಾರ್ಯಕರ್ತರೊಂದಿಗೆ `ಚಂದ್ರಯಾನ ಯಶಸ್ವಿಯಾಗಲಿ, ವಂದೇ ಮಾತರಂ, ವಿಜ್ಞಾನಿಗಳಿಗೆ ಜಯವಾಗಲಿ, ಭಾರತ್ ಮಾತಾಕಿ ಜೈ ಎಂಬ ಘೋಷಣೆಗಳೊಂದಿಗೆ ಕೋಲಾರಮ್ಮ ದೇವಾಲಯಕ್ಕೆ ಮೆರವಣಿಗೆಯಲ್ಲಿ ಆಗಮಿಸಿದ ಸಂಸದ ಎಸ್.ಮುನಿಸಾಮಿ, ಅಮ್ಮನವರಿಗೆ ಪ್ರಿಯವಾದ ನಿಂಬೆಹಣ್ಣಿನ ಹಾರ ಮತ್ತು ತಾವರೆಹೂಗಳನ್ನು ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಎಸ್.ಮುನಿಸ್ವಾಮಿ, ಪ್ರಧಾನಿ ನರೇಂದ್ರಮೋದಿಯವರ ಸಹಕಾರದಿಂದ ಚಂದ್ರಯಾನ ೩ ಯಶಸ್ವಿಯಾಗುತ್ತಿದೆ. ಬುಧವಾರ ಸಂಜೆ ೬ಗಂಟೆಗೆ ವಿಕ್ರಂ ನೌಕೆ ಯಶಸ್ವಿಯಾಗಿ ಲ್ಯಾಂಡ್ ಆಗಲಿ. ಇದು ಇಡೀ ದೇಶದ ಜನರು ಹೆಮ್ಮೆ ಪಡುವ ವಿಚಾರ, ಭಾಹ್ಯಾಕಾಶ ಸಂಶೋಧನೆಯಲ್ಲಿ ಭಾರತದ ಈ ಹೊಸ ಮೈಲಿಗಲ್ಲು ಇಡೀ ವಿಶ್ವ ನಮ್ಮತ್ತ ತಿರುಗಿ ನೋಡುವಂತೆ ಮಾಡಿದೆ ಎಂದರು.
ಈ ಯಶಸ್ಸಿನ ಮೂಲಕ ಭಾರತ ವಿಶ್ವಗುರು ಎನ್ನುವ ಮಾತಿಗೆ ಅರ್ಥ ಪಡೆದುಕೊಳ್ಳಲಿದೆ. ನಮ್ಮ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ಚಂದ್ರಯಾನ ೩ ಯಶಸ್ಸಿಗೆ ಠೊಂಕ ಕಟ್ಟಿ ನಿಂತಿದ್ದಾರೆ. ಯಾರೂ ಮಾಡದ ಸಾಧನೆ ಭಾರತ ಮಾಡಲು ಹೊರಟಿರುವುದರಿಂದ ಇಡೀ ವಿಶ್ವದ ಕಣ್ಣು ಈಗ ಭಾರತದತ್ತ ನೆಟ್ಟಿದೆ. ಆದರೆ ನಮ್ಮ ದೇಶದಲ್ಲಿ ಕೆಲವು ವಿಕೃತ ಮನಸ್ಸಿನವರು ವಿನಾ ಕಾರಣ ಟೀಕಿಸುವುದು, ವಿಜ್ಞಾನಿಗಳ ಆತ್ಮಸ್ಥೆöÊರ್ಯ ಕುಗ್ಗಿಸುವಂತಹ ಮಾತುಗಳನ್ನಾಡುತ್ತಿದ್ದು, ಅಂತಹವರಿಗೂ ಶಕ್ತಿ ದೇವತೆ ಕೋಲಾರಮ್ಮ ಒಳ್ಳೆಯ ಬುದ್ಧಿಕೊಡಲಿ. ಯಾರ ವಕ್ರದೃಷ್ಠಿಯೂ ವಿಕ್ರಂ ನೌಕೆ ಮೇಲೆ ಬೀಳದಿರಲಿ, ಯೋಜನೆ ಯಶಸ್ವಿಯಾಗಲಿ ಎಂದು ಅಮ್ಮನವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.
ಪ್ರಕಾಶ್ ಪಾಕ್‌ಗೆ ಹೋಗಲಿ: ಬಹುಭಾಷಾ ನಟ ಪ್ರಕಾಶ್ ರಾಜ್ ಚಂದ್ರಯಾನ ೩ ರ ಬಗ್ಗೆ ಅಪಸ್ವರ ಎತ್ತಿದರೆ ತಾನು ಹೀರೋ ಆಗುತ್ತೇನೆಂಬ ಭ್ರಮೆಯಲ್ಲಿ ಟೀಕೆ ಮಾಡಿದ್ದಾರೆ. ಈತ ಭಾರತದಲ್ಲಿ ಇರಲು ಯೋಗ್ಯರಲ್ಲ, ಒಬ್ಬ ಸಾಮಾನ್ಯ ಪ್ರಜೆಗೆ ಇರಬೇಕಾದ ಕನಿಷ್ಠ ಪ್ರಜ್ಞೆ ಸಹ ಆತನಿಗಿಲ್ಲ. ಆತ ಪಾಕಿಸ್ತಾನ ಅಥವಾ ಆಪ್ಘಾನಿಸ್ಥಾನದಲ್ಲೋ ಇರಬೇಕಾಗಿತ್ತು. ಚಂದ್ರಯಾನವನ್ನು ಟೀಕೆ ಮಾಡಿ ಹೀರೋ ಆಗಲು ಹೋಗಿ ದೇಶದ ಜನರೆದುರು ಜೀರೋ ಆಗಿದ್ದಾನೆ ಎಂದು ಸಂಸದ ಎಸ್.ಮುನಿಸ್ವಾಮಿ ವಾಗ್ಧಾಳಿ ನಡೆಸಿದರು.