ಜಿಲ್ಲೆ

ಚಂದ್ರಯಾನ-3 ಮತ್ತೊಂದು ಮೈಲಿಗಲ್ಲು

ಮೈಸೂರು : ಚಂದ್ರಯಾನ-3 ಯೋಜನೆಯು ಭಾರತದ ಬಾಹ್ಯಾಕಾಶ ಸಂಶೋಧನಾ ಶಕ್ತಿಯ ಮತ್ತೊಂದು ಮೈಲುಗಲ್ಲು ಆಗಿದೆ ಎಂದು ಇಸ್ರೋ ನಿವೃತ್ತ ವಿಜ್ಞಾನಿ ಸಿ.ಡಿ.ಪ್ರಸಾದ್ ಹೇಳಿದರು.

ಮೈಸೂರು ಸೈನ್ಸ್ ಫೌಂಡೇಷನ್ 11ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ವಿಜಯ ವಿಠ್ಠಲ ಪಿಯು ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದ ಬಹು ನಿರೀಕ್ಷಿತ ಚಂದ್ರಯಾನ-3 ತನ್ನ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಮಿಷನ್ ಚಂದ್ರಯಾನ-3ರ ಕಕ್ಷೆ ಬದಲಾಯಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಮುಂದುವರಿದ ಬಹಳಷ್ಟು ದೇಶಗಳಿಗೆ ಇದು ಇನ್ನೂ ಸಾಧ್ಯವಾಗಿಲ್ಲ ಎಂದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಚಂದ್ರಯಾನ-3 ಅನ್ನು ಚಂದ್ರನ ಕಕ್ಷೆಗೆ ಎತ್ತುವ 4ನೇ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಕೆಲಸವನ್ನು ಬೆಂಗಳೂರು ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್‌ನಿಂದ ಮಾಡಲಾಗಿದೆ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.

ಚಂದ್ರನತ್ತ ಸಾಗಲು ನಾಸಾಗೆ 5 ದಿನಗಳು ಸಾಕಾದರೆ, ಇಸ್ರೋಗೆ 45 ದಿನ ಏಕೆ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹಣ, ಇಂಧನ ಉಳಿತಾಯ ಮತ್ತು ಇವೆಲ್ಲವನ್ನು ಪರಿಗಣನೆ ತೆಗೆದುಕೊಳ್ಳಬೇಕು. ಸ್ವದೇಶದಲ್ಲಿ ಅಭಿವೃದ್ಧಿ ಪಡಿಸಿದ ಹೊಸ ತಂತ್ರಜ್ಞಾನವನ್ನು ಈ ಯೋಜನೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದರು.

ಸಿಎಸ್‌ಆರ್‌ಟಿಐ ಹಿರಿಯ ವಿಜ್ಞಾನಿ ಡಾ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಮೂಲ ವಿಜ್ಞಾನ ಕಲಿಕೆ ಕಡಿಮೆಯಾಗಿದೆ. ಇದನ್ನು ಅಭ್ಯಾಸ ಮಾಡಲು ವಿದ್ಯಾರ್ಥಿಗಳು ಸಹ ಮುಂದೆ ಬರುತ್ತಿಲ್ಲ. ಈ ರೀತಿಯ ನಿರಾಸಕ್ತಿಯಿಂದ ವಿಜ್ಞಾನ ಕ್ಷೇತ್ರಕ್ಕೆ ಹಿನ್ನೆಡೆಯಾಗಲಿದೆ. ಆದ್ದರಿಂದ ವಿಜ್ಞಾನ ಬೋಧಕರು, ವಿಜ್ಞಾನಿಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಮುಂದಾಗಬೇಕು ಎಂದರು.

ಅಂಚೆಪತ್ರ ಚಿತ್ರಕಲೆ ಪ್ರದರ್ಶನವನ್ನು ಉದ್ಘಾಟಿಸಿದ ಭಾರತೀಯ ಅಂಚೆ ಇಲಾಖೆಯ ಮೈಸೂರು ವಿಭಾಗದ ಹಿರಿಯ ಅಧೀಕ್ಷಕ ಡಾ.ಏಂಜೆಲ್ ರಾಜ್ ಮಾತನಾಡಿ, ಚಂದ್ರಯಾನವಾಗಲಿ ಅಥವಾ ಬೆರಳಚ್ಚುಗಳ ಅಧ್ಯಯನವಿರಲಿ, ನಮಗೆ ಕಂಡುಬರುವ ಸಾಮಾನ್ಯ ಅಂಶ ವಿಜ್ಞಾನವಾಗಿದೆ. ಮೈಸೂರು ಸೈನ್ಸ್ ಫೌಂಡೇಷನ್ ವತಿಯಿಂದ ವಿಜ್ಞಾನ ಕುರಿತು ವಿದ್ಯಾರ್ಥಿಗಳಿಗೆ ಅರಿವು, ಕಲಿಕೆ, ಉತ್ತೇಜನ ನೀಡುವ ಕೆಲಸ ಮಾಡುತ್ತಿದೆ ಎಂದರು.

ಪತಂಗ ಸಪ್ತಾಹದ ಅಂಗವಾಗಿ ಎಂಎಸ್‌ಎಫ್ ಆಯೋಜಿಸಿದ್ದ ಪೋಸ್ಟ್ ಕಾರ್ಡ್ ಚಿತ್ರ ರಚನೆಗೆ 1,250 ವಿದ್ಯಾರ್ಥಿಗಳು ಚಿತ್ರಗಳನ್ನು ಕಳುಹಿಸಿದ್ದರು. ಈ ಪೈಕಿ ಉತ್ತಮವಾದ 400 ಪೋಸ್ಟ್ ಕಾರ್ಡ್‌ಗಳ ಪ್ರದರ್ಶನ ಮಾಡಲಾಯಿತು. ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ ಉಪನಿರ್ದೇಶಕ ಡಾ.ವಿನೋದ್ ಜೆ.ಲಕ್ಕಪ್ಪನ್, ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಶಂಕರ್, ಎಂಎಸ್‌ಎಫ್ ಅಧ್ಯಕ್ಷ ಸಿ.ಕೃಷ್ಣೇಗೌಡ, ಉಪಾಧ್ಯಕ್ಷ ಡಾ.ಟಿ.ಶಿವಲಿಂಗಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.