ಜಿಲ್ಲೆ

ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಸಾರಾ ಅಲಿಖಾನ್ ಭೇಟಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಇಲ್ಲಿಯ ಉಣಕಲ್ಲ್​ನ ಐತಿಹಾಸಿಕ ಪ್ರಸಿದ್ಧ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಗುರುವಾರ ಭೇಟಿ ನೀಡಿ ತೆರಳಿದ್ದಾರೆ.

ದೇವಾಲಯದ ಮುಂಭಾಗದಲ್ಲಿ ಕೆಲ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿರುವ ಅವರು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮೇಲೆಯೇ ಅವರು ಇಲ್ಲಿಗೆ ಭೇಟಿ ನೀಡಿರುವುದು ಬಹಿರಂಗಗೊಂಡಿದೆ. ನಟಿ ಸಾರಾ ಅಲಿ ಖಾನ್ ಇಲ್ಲಿಗೆ ಭೇಟಿ ನೀಡುವ ಬಗ್ಗೆ ಮುಂಚಿತವಾಗಿ ಯಾರಿಗೂ ತಿಳಿಸಿರಲಿಲ್ಲ. ಸ್ಥಳೀಯರಿಗೂ ಗೊತ್ತಿರಲಿಲ್ಲ. ಸಾಮಾನ್ಯರಂತೆ ಬಂದು ತೆರಳಿದ್ದಾರೆ.

ಚಂದ್ರಮೌಳೇಶ್ವರ ದೇವಾಲಯಕ್ಕೆ ಅವರು ಭೇಟಿ ನೀಡಿದ ಚಿತ್ರಗಳನ್ನು ಅಭಿಮಾನಿಗಳು, ನೆಟ್ಟಿಗರು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಸಾರಾ ಅಲಿ ಖಾನ್ ಹಿಂದೂ ಧರ್ಮ ಹಾಗೂ ದೇವಾಲಯಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ನಿಯಮಿತವಾಗಿ ಅವರು ದೇಶದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಶಿವ ಭಕ್ತೆಯಾಗಿರುವ ಸಾರಾ ಅಲಿಖಾನ್, ಕೇದಾರನಾಥ, ಕಾಶಿ ಸೇರಿದಂತೆ ಉತ್ತರ ಭಾರತದ ಹಲವು ಪ್ರಮುಖ ಶಿವ ದೇವಾಲಯಗಳ ದರ್ಶನ ಮಾಡಿದ್ದಾರೆ. ಅವುಗಳ ಫೋಟೋಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹಂಚಿಕೊಂಡಿದ್ದರು.

ಚಾಲುಕ್ಯರ ಕಾಲದಲ್ಲಿ ನಿರ್ವಣವಾದ ಉಣಕಲ್ಲ್ ಚಂದ್ರಮೌಳೇಶ್ವರ ದೇವಸ್ಥಾನ ಶಿಲ್ಪಕಲೆಗೆ ಪ್ರಸಿದ್ಧಿಯಾಗಿದೆ. ದೇವಾಲಯದ ಸುತ್ತಲೂ ಸುಂದರವಾದ ಕೆತ್ತನೆಗಳಿವೆ. ಭಾರತೀಯ ಪುರಾತತ್ವ ಇಲಾಖೆ (ಎಎಸ್​ಐ)ಯ ಅಧೀನದಲ್ಲಿದೆ. ದೇವಸ್ಥಾನಕ್ಕೆ ತೆರಳಲು ರಸ್ತೆ ಇಲ್ಲ. ಸುತ್ತಲಿನ ಪ್ರದೇಶ ಅತಿಕ್ರಮಣಗೊಂಡಿದೆ. ಅತಿಕ್ರಮಣ ತೆರವು, ಪುನರ್ವಸತಿ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಭಾರತೀಯ ಪುರಾತತ್ವ ಇಲಾಖೆ ಸರ್ವೆ ಕೈಗೊಂಡಿದೆ.