ಚಿಕ್ಕಮಗಳೂರಿನಿಂದ ದತ್ತಪೀಠಕ್ಕೆ ಸಂಪರ್ಕ ಕಲ್ಪಿಸುವ ಸರ್ಪನದಾರಿಯಿಂದ ಮುಂದೆ ಹಾಗೂ ಕವಿಕಲ್‌ಗಂಡಿಯಿಂದ ಹಿಂದೆ ನೀರು ಹರಿದು ರಸ್ತೆ ಕುಸಿಯದಂತೆ ಮರಳಿನ ಚೀಲಗಳನ್ನು ಇಟ್ಟಿರುವುದು. 
ಜಿಲ್ಲೆ

ಚಂದ್ರದ್ರೋಣ ಪರ್ವತದಲ್ಲಿ ಭೂ ಕುಸಿತ ಭೀತಿ

ನಿತ್ಯಾನಂದ ಶಿವಗಂಗೆ ಚಿಕ್ಕಮಗಳೂರು

ಕಳೆದ ವರ್ಷ ಮಳೆಗಾಲದ ಅವಧಿಯಲ್ಲಿ ದತ್ತಪೀಠಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ಕವಿಕಲ್ ಗಂಡಿ ಬಳಿ ಭೂಕುಸಿತ ಸಂಭವಿಸಿ ದತ್ತಪೀಠಕ್ಕೆ ಬರೋಬ್ಬರಿ ಒಂದು ತಿಂಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಆದರೆ ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನವೇ ದತ್ತಪೀಠ ರಸ್ತೆಯಲ್ಲಿ ಭೂಕುಸಿತದ ಆತಂಕ ಎದುರಾಗಿದೆ.

ಹೌದು. ಈಗಾಗಲೇ ದತ್ತಪೀಠ ರಸ್ತೆಯ ಸರ್ಪನ ದಾರಿಯಿಂದ ಮುಂದೆ ಹಾಗೂ ಕವಿಕಲ್ ಗಂಡಿಯಿಂದ ಹಿಂದೆ ರಸ್ತೆ ಪಕ್ಕದಲ್ಲಿಯೇ ಭೂಕುಸಿತ ಉಂಟಾಗುವ ಅಪಾಯ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಯ ಪಕ್ಕದಲ್ಲಿ ಮರಳಿನ ಚೀಲವನ್ನು ಇಟ್ಟು ಅಲ್ಲಿ ನೀರು ಕೆಳಗೆ ಇಳಿಯದಂತೆ ತಡೆಯಲಾಗಿದೆ. ಒಂದು ವೇಳೆ ರಸ್ತೆಯ ಮೇಲೆ ಹರಿದು ಬರುವ ನೀರು ಇಲ್ಲಿಯೇ ಹರಿದು ಹೋಗಿದ್ದೆ ಆದಲ್ಲಿ ಇನ್ನು ಕೆಲವೇ ದಿನಗಳಲ್ಲಿ ರಸ್ತೆ ಕುಸಿತವಾಗಿ ದತ್ತಪೀಠ ಸಂಪರ್ಕ ಕಡಿತಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಳೆದ ವರ್ಷ ಮುಂಗಾರಿನಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದರಿಂದಾಗಿ ಮಳೆಗಾಲದ ಮಧ್ಯಾವಧಿಯಲ್ಲಿ ಕವಿಕಲ್ ಗಂಡಿ ಬಳಿ ಭೂಕುಸಿತ ಉಂಟಾಗಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಒಂದು ತಿಂಗಳ ಕಾಲ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಆದರೆ ಈ ಬಾರಿ ಮುಂಗಾರಿಗೂ ಮುನ್ನವೇ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ಗಿರಿ ಶ್ರೇಣಿಯ ಮಣ್ಣು ಸಡಿಲಗೊಂಡಿದ್ದು ಮಳೆಗಾಲದ ಅವಧಿಯಲ್ಲಿ ಭಾರಿ ಪ್ರಮಾಣದ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ಇದಕ್ಕೆ ಮುನ್ನೆಚ್ಚರಿಕೆ ಎಂಬಂತೆ ಈಗಾಗಲೇ ಸರ್ಪನದಾರಿಯಿಂದ ಮುಂದೆ ಹಾಗೂ ಕವಿಕಲ್ ಗಂಡಿಯಿಂದ ಹಿಂದೆ ಈಗಾಗಲೇ ಭೂ ಕುಸಿತದ ಭೀತಿ ಎದುರಾಗಿದೆ.

ಒಂದು ವೇಳೆ ದತ್ತಪೀಠ ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿದ್ದೇ ಆದಲ್ಲಿ ಮತ್ತೆ ಈ ಮಾರ್ಗ ಸರಿಯಾಗಲು ತಿಂಗಳುಗಳೇ ಬೇಕಾಗಲಿದೆ. ಅದೂ ಮಳೆ ಬಿಡುವು ನೀಡಿದರೆ ಮಾತ್ರ. ಹೀಗಿರುವಾಗ ಭೂ ಕುಸಿತ ಸಂಭವಿಸುವ ಮುನ್ನಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.

ಎಲ್ಲೆಂದರಲ್ಲಿ ನುಗ್ಗುವ ನೀರು

ರಾಜ್ಯದ ಅತಿ ಎತ್ತರದ ಪರ್ವತ ಮುಳ್ಳಯ್ಯನಗಿರಿ ಇರುವುದು ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ. ಈ ಪರ್ವತ ಶ್ರೇಣಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತದೆ. ಹೀಗೆ ಸುರಿಯುವ ನೀರು ಝರಿಗಳ ಹಾಗೂ ತೊರೆಗಳ ಮೂಲಕ ಹರಿದು ಹೋದರೆ, ರಸ್ತೆಗೆ ಹೊಂದಿಕೊಂಡಂತಿರುವ ಗಿರಿಶ್ರೇಣಿ ಹಾಗೂ ರಸ್ತೆಯ ನೀರು ಎಲ್ಲಿ ತಗ್ಗು ಪ್ರದೇಶವಿದೆಯೋ ಅಲ್ಲಿ ನುಗ್ಗುತ್ತಿದೆ. ಹೀಗೆ ನೀರು ನುಗ್ಗುವ ಪ್ರದೇಶದಲ್ಲಿ ಭೂಕುಸಿತ ಸಂಭವಿಸುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಮಳೆಗಾಲ ಆರಂಭಕ್ಕೂ ಮೊದಲು ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಎಲ್ಲಾ ರಸ್ತೆಗಳ ಬದಿಯ ಚರಂಡಿಗಳಲ್ಲಿನ ಹೂಳನ್ನು ತೆಗೆಯಲು ಕ್ರಮ ಕೈಗೊಳ್ಳಬೇಕು. ಆಗ ಎಷ್ಟೇ ಮಳೆ ಬಂದರೂ ನೀರು ರಸ್ತೆ ಬದಿಯ ಚರಂಡಿಗಳಲ್ಲಿ ಹರಿದು ತೊರೆ ಅಥವಾ ಝರಿಗಳ ನೀರಿನೊಂದಿಗೆ ಹರಿದು ಹೋಗುತ್ತದೆ. ಆಗ ಎಲ್ಲಿಂದರಲ್ಲಿ ಭೂಕುಸಿತ ಸಂಭವಿಸುವುದಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ವಿದ್ಯಾರ್ಥಿಗಳಿಗೆ ಸಂಕಷ್ಟ

ಇನ್ನೇನು ಕೆಲವೇ ದಿನಗಳಲ್ಲಿ ಶಾಲಾ ಕಾಲೇಜುಗಳು ಆರಂಭಗೊಳ್ಳಲಿವೆ. ಇಂಥ ಸಂದರ್ಭದಲ್ಲಿ ಎಲ್ಲಿಯಾದರೂ ದತ್ತಪೀಠ ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿದ್ದೇ ಅದಲ್ಲಿ ಈ ವರ್ಷವೂ ದತ್ತಪೀಠ ಭಾಗದ ನೂರಾರು ವಿದ್ಯಾರ್ಥಿಗಳು ಶಾಲೆಗೆ  ತೆರಳಲು ಸಂಕಷ್ಟಪಡಬೇಕಾದ ಸಾಧ್ಯತೆಯಿದೆ.

ಕಳೆದ ಬಾರಿ ದತ್ತಪೀಠ ಮಾರ್ಗದಲ್ಲಿ ಭೂ ಕುಸಿತ ಸಂಭವಿಸಿದ್ದರಿಂದಾಗಿ ಅತ್ತಿಗುಂಡಿ, ಗಾಳಿಕೆರೆ, ದತ್ತಪೀಠ ಸೇರಿದಂತೆ ಹತ್ತಾರು ಹಳ್ಳಿಗಳ ನೂರಾರು ವಿದ್ಯಾರ್ಥಿಗಳು ಚಿಕ್ಕಮಗಳೂರು ನಗರದ ಶಾಲಾ ಕಾಲೇಜುಗಳಿಗೆ ಪ್ರತಿದಿನ ಬಂದು ಹೋಗಲು ಹರಸಾಹಸಪಡುವಂತಾಗಿತ್ತು. ಈ ಬಾರಿ ಶೈಕ್ಷಣಿಕ ವರ್ಷದ ಆರಂಭದಲ್ಲೇ ಭೂ ಕುಸಿತ ಸಂಭವಿಸಿದಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಭಾರಿ ಹಿನ್ನಡೆಯಾಗಲಿದೆ. ಹೀಗಾಗಿ ಒಂದು ವೇಳೆ ಭೂ ಕುಸಿತ ಸಂಭವಿಸಿದ್ದೇ ಆದಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಚಿಕ್ಕಮಗಳೂರು ನಗರದ ಹಾಸ್ಟೆಲ್ ಗಳಲ್ಲಿ ತಾತ್ಕಾಲಿಕ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಮುಂಗಾರು ಆರಂಭಕ್ಕೂ ಮೊದಲು ರಸ್ತೆ ಬದಿಯಲ್ಲಿನ ಚರಂಡಿಗಳ ಹೂಳು ತೆಗೆದರೆ ಗಿರಿ ಶ್ರೇಣಿಯಲ್ಲಿ ಹೆಚ್ಚಿನ ಪ್ರಮಾಣದ ಭೂ ಕುಸಿತ ಸಂಭವಿಸುವುದಿಲ್ಲ. ಆದರೆ ಈ ಕೆಲಸ ಮಾಡುವುದಿಲ್ಲ. ಮಳೆಗಾಲ ಆರಂಭಗೊಂಡು ನೀರು ಎಲ್ಲೆಂದರಲ್ಲಿ ನೀರು ನುಗ್ಗಲು ಆರಂಭಿಸಿದ ಬಳಿಕ ಚರಂಡಿ ತೆರವು ಮಾಡಲು ಬರುತ್ತಾರೆ. ಹೀಗಾಗಿ ಭೂ ಕುಸಿತ ಹೆಚ್ಚುತ್ತಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಗುರುವೇಶ್ ಗೌಡ, ಸ್ಥಳೀಯ ನಿವಾಸಿ