ಜಿಲ್ಲೆ

ಚಂದ್ರಘಂಟಾ ಆರಾಧನೆಯೊಂದಿಗೆ ಶರನ್ನವರಾತ್ರಿ

Chitradurga - Desk - Pranav Kumar

ಚಿತ್ರದುರ್ಗ: ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಮೂರನೇ ದಿನವಾದ ಶನಿವಾರ ಚಂದ್ರಘಂಟಾ ದೇವಿಯ ಆರಾಧನೆಯೊಂದಿಗೆ ಜಿಲ್ಲೆಯ ಹಲವು ಶಕ್ತಿದೇವತೆಗಳ ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ ಸೇವೆ, ಪ್ರಾರ್ಥನೆ ಸಲ್ಲಿಸಲಾಯಿತು.

ದೇಗುಲಗಳಲ್ಲಿ ಬೆಳಗ್ಗೆ ಮತ್ತು ಸಂಜೆ ದೇವಿ ಪುರಾಣ ಪಾರಾಯಣ, ಚಂದ್ರಘಂಟಾ ಮಂತ್ರ ಪಠಣ, ಭಜನೆ ಸೇರಿ ದೇವಿಗೆ ಶ್ರದ್ಧಾ-ಭಕ್ತಿ ಸಮರ್ಪಿಸಲಾಯಿತು.

ಏಕನಾಥೇಶ್ವರಿ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಕಣಿವೆ ಮಾರಮ್ಮ ದೇವಿಗೆ ಪುಷ್ಪ, ಉಚ್ಚಂಗಿಯಲ್ಲಮ್ಮ ದೇವಿಗೆ ಢಮರುಗ, ಬರಗೇರಮ್ಮ ದೇವಿಗೆ ಡ್ರೈ ಫ್ರೂಟ್ಸ್‌ನಿಂದ ವಿಶೇಷ ಅಲಂಕಾರ ಸೇವೆ ನೆರವೇರಿತು.

ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಚೌಡೇಶ್ವರಿ, ಹೊಳಲ್ಕೆರೆ ರಸ್ತೆಯ ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ಕಾಳಿಕಮಠೇಶ್ವರಿ, ಚಾಮುಂಡೇಶ್ವರಿ ದೇವಿ ದೇಗುಲಗಳಲ್ಲೂ ವಿಶೇಷ ಪೂಜೆ ಜರುಗಿದವು.

ತಾಲೂಕಿನ ಮೆದೇಹಳ್ಳಿ ಭೋವಿ ಕಾಲನಿಯ ಕೊಲ್ಲಾಪುರದ ಮಹಾಲಕ್ಷ್ಮೀ ದೇವಿಗೆ ಚಂದ್ರಘಂಟಾ ಮಾದರಿಯಲ್ಲಿ, ಬೊಗಳೇರಹಟ್ಟಿ ದುರ್ಗಾಂಬಿಕಾ ದೇವಿಗೆ ಪುಷ್ಪ, ಬುರುಜನಹಟ್ಟಿಯ ಸಿಂಗಧೂರ ಚೌಡೇಶ್ವರಿ ದೇವಿಗೆ ಕೂರ್ಮಾವತಾರದಲ್ಲಿ ಆಕರ್ಷಕವಾಗಿ ಅಲಂಕರಿಸಲಾಗಿತ್ತು.

ಸಾವಿರಾರು ಭಕ್ತರು ದೇಗುಲಗಳಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಹಲವೆಡೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.