ಹೊನ್ನಾಳಿ: ಸೊರಬ ತಾಲೂಕಿನ ಚಂದ್ರಗುತ್ತಿ ದೇವಾಲಯದ ಉತ್ಸವ ಮೂರ್ತಿಯನ್ನು ದುಷ್ಕರ್ಮಿಗಳು ಧ್ವ್ವಂಸಗೊಳಿಸಿದ್ದನ್ನು ಖಂಡಿಸಿ ಹೊನ್ನಾಳಿ ತಾಲೂಕಿನ ರೇಣುಕಾಂಬ ದೇವಿ ಭಕ್ತರು ಪ್ರತಿಭಟನಾ ಮೆರವಣಿಗೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಭಕ್ತರು ಗುರುವಾರ ಪಟ್ಟಣದ ಸಂಗೊಳ್ಳಿರಾಯಣ್ಣ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಗ್ರೇಡ್ 2 ತಹಸೀಲ್ದಾರ್ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.
ಭಕ್ತರು ಮಾತನಾಡಿ, ಈ ಹಿಂದೆಯೂ ಕಳ್ಳತನದ ನೆಪದಲ್ಲಿ ಚಂದ್ರಗುತ್ತಿ ದೇವಿ ಮೂರ್ತಿಯನ್ನು ಧ್ವ್ವಂಸಗೊಳಿಸಲಾಗಿತ್ತು. ಪದೇಪದೆ ವಿಗ್ರಹ ಧ್ವಂಸ ಮಾಡುತ್ತಿರುವುದು ನೋವು ತಂದಿದೆ. ಇನ್ನಾದರೂ, ಅಲ್ಲಿನ ತಾಲೂಕು ಆಡಳಿತ ಎಚ್ಚೆತ್ತು ಚಂದ್ರಗುತ್ತಿಯ ರೇಣುಕಾಂಬ ದೇವಸ್ಥಾನಕ್ಕೆ ಪೊಲೀಸ್ ಪಹರೆ ಹಾಕಿ, ಸೂಕ್ತ ರಕ್ಷಣೆ ನೀಡಬೇಕು. ಉತ್ಸವಮೂರ್ತಿ ಧ್ವಂಸಗೊಳಿಸಿರುವ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ಹಾಗೂ ಇತರ ಸಂಘಟನೆಗಳ ಪ್ರಮುಖರಾದ ವಿನಯ್ ವಗ್ಗರ್ ರಾಜು ಕಣಗಣ್ಣಾರ್, ಸೊರಟೂರು ಹನುಮಂತಪ್ಪ, ನಾಗಪ್ಪ, ರವಿ ಜೋಗಪ್ಪ, ಮಂಜಪ್ಪ ಮಾರಿಕೊಪ್ಪ, ಗವಿಸಿದ್ದಪ್ಪ, ನಾಗಪ್ಪ ಶಿಕಾರಿಪುರ, ಕೋಣನತಲೆ ಹನುಮಂತಪ್ಪ, ರುದ್ರೇಶ್ ಅರೆಹಳ್ಳಿ ಇತರರು ಇದ್ದರು.