ವಿಜಯಕುಮಾರ್ ನಾಡಿಗೇರ್ ಶಿಕಾರಿಪುರ
ಶಿಕಾರಿಪುರ: ನಾಡಿನಲ್ಲೇ ಅತ್ಯಂತ ಶ್ರೇಷ್ಠವಾದ ಗಂಧವನ್ನು ತಾಲೂಕಿನಲ್ಲಿ ಬೆಳೆಯಲಾಗುತ್ತಿದೆ. ಇಲ್ಲಿನ ಶ್ರೀಗಂಧಕ್ಕೆ ಹೆಚ್ಚಿನ ಬೇಡಿಕೆ ಮತ್ತು ವೌಲ್ಯವಿರುವ ಹಿನ್ನೆಲೆಯಲ್ಲಿ ಚಂದ್ರಕಲಾ ಅರಣ್ಯ ಪ್ರದೇಶವೀಗ ಗಮನಸೆಳೆದಿದೆ.
ಚಂದ್ರಕಲಾ ಅರಣ್ಯ ಪ್ರದೇಶದಲ್ಲಿ 500 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಸಹಜವಾದ ಶ್ರೀಗಂಧವಿದೆ. ಹುಲಗಿನಕಟ್ಟೆ, ದೂಪದಹಳ್ಳಿ ಾರೆಸ್ಟ್, ಬಸವಾಪುರ, ಎರೆಕಟ್ಟೆ ಅರಣ್ಯ ಪ್ರದೇಶದಲ್ಲಿ 250 ಎಕರೆ ಪ್ರದೇಶದಲ್ಲಿ ಶ್ರೀಗಂಧ ಬೆಳೆಯಲಾಗಿದೆ.
ಶ್ರೀಗಂಧ ರಕ್ಷಣೆಗೆ ವಿಶೇಷ ತರಬೇತಿ ಪಡೆದ ಎರಡು ಮುಧೋಳ್ ನಾಯಿಗಳನ್ನು ಚಂದ್ರಕಲಾ ಅರಣ್ಯ ಪ್ರದೇಶದಲ್ಲಿ ಕಳೆದ 3 ವರ್ಷಗಳಿಂದ ಸಾಕಲಾಗಿದೆ. ವಿಶೇಷವೆಂದರೆ ಎರಡು ನಾಯಿಗಳಲ್ಲಿ ಒಂದಕ್ಕೆ ಚಂದ್ರ ಎಂದು, ಇನ್ನೊಂದಕ್ಕೆ ಕಲಾ ಎಂದು ಹೆಸರಿಡಲಾಗಿದೆ. ಈ ಅರಣ್ಯ ರಕ್ಷಣೆಗೆ ಇಲಾಖೆ ಸಿಬ್ಬಂದಿ ಹಗಲಿರುಳೂ ಶ್ರಮಿಸುತ್ತಿದ್ದಾರೆ.
ಆದರೆ ಶಿಕಾರಿಪುರ ಅರಣ್ಯ ಇಲಾಖೆಗೆ ಸೌಕರ್ಯಗಳ ಕೊರತೆಯಿದೆ. 2013ರಲ್ಲಿ ಗಸ್ತಿಗಾಗಿ ನೀಡಿರುವ ಜೀಪ್‌ಗಳು ಮೂರೂ ವಲಯಕ್ಕೆ ಒಳಪಡುತ್ತವೆ. ಅತ್ಯಂತ ಹಳೆಯದಾಗಿದ್ದು, ಅರಣ್ಯ ರಕ್ಷಣೆ ಕಾರ್ಯಾಚರಣೆ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಅರಣ್ಯ ರಕ್ಷಕರಲ್ಲಿ ವಿಶ್ವಾಸ ಉಂಟಾಗಲು ಹೊಸ ವಾಹನಗಳು ಹಾಗೂ ಆಧುನಿಕ ಶಸಾಸಗಳನ್ನು ನೀಡಬೇಕಾದ ಅಗತ್ಯವಿದೆ.
ಶ್ರೀಗಂಧಕ್ಕೆ ಕಳ್ಳರ ಕಾಟ ಜಾಸ್ತಿ. ಇಂತಹ ಸಮಯದಲ್ಲಿ ಅವರನ್ನು ಎದುರಿಸಲು ಸಮರ್ಪಕ ಸಿಬ್ಬಂದಿ ಅಗತ್ಯವಿದೆ. 18 ಜನ ಅರಣ್ಯ ಕಾವಲುಗಾರರು ಇರಬೇಕಾದ ಜಾಗದಲ್ಲಿ 7 ಜನ ಮಾತ್ರ ಇದ್ದಾರೆ. ಈ ನಡುವೆಯೂ ಅರಣ್ಯ ಇಲಾಖೆ ಶ್ರೀಗಂಧವನ್ನು ರಕ್ಷಿಸುತ್ತಿದೆ. ಜತೆಗೆ ಅರಣ್ಯ ಒತ್ತುವರಿ ರಕ್ಷಣೆಯ ಹೊಣೆ ಅರಣ್ಯ ಇಲಾಖೆ ಮೇಲಿದೆ.
ಶಿಕಾರಿಪುರ ಪ್ರಾದೇಶಿಕ ಅರಣ್ಯ ವಲಯದಲ್ಲಿರುವ ಚಂದ್ರಕಲಾ ಅರಣ್ಯ ಪ್ರದೇಶವು 3,169.6 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಇದರಲ್ಲಿ ಶ್ರೀಗಂಧ, ಹುಣಸೆ, ಕಿರು ಬಿದಿರು, ಮತ್ತಿ, ದಿಂಡಿಗ ಜಾತಿಯ ಮರಗಳಿವೆ. ಈ ಪ್ರದೇಶ ಹಾವೇರಿ ಜಿಲ್ಲೆಯ ಅಂಚಿನವರೆಗೆ ವ್ಯಾಪಿಸಿದೆ. ಶಿಕಾರಿಪುರ ತಾಲೂಕು ಉಡುಗಣಿ ಹೋಬಳಿ ವ್ಯಾಪ್ತಿಗೆ ಒಳಪಡುತ್ತದೆ.
ಹೊಳೆಯುವ ಬೆಟ್ಟ
ಚಂದ್ರಕಲಾ ಅರಣ್ಯ ವ್ಯಾಪ್ತಿ ಬೆಳದಿಂಗಳ ಬೆಳಕಿನಲ್ಲಿ ಹೊಳೆಯುತ್ತವೆ. ಇದರಿಂದ ಸಂಪೂರ್ಣ ಬೆಟ್ಟವೇ ಮಿನುಗುವಂತೆ ಕಾಣುತ್ತದೆ. ಇದಕ್ಕೆ ಕಾರಣ ಅದರಲ್ಲಿರುವ ವಿಶೇಷ ಕಲ್ಲುಗಳು ಬೆಳದಿಂಗಳಂತೆ ಹೊಳೆಯುತ್ತವೆ. ಮ್ಯಾಂಗನೀಸ್ ಅಂಶವುಳ್ಳ ಕಲ್ಲುಗಳನ್ನು ಹೊಂದಿದ್ದು ಇವುಗಳು ಅಪರೂಪವಾಗಿವೆ. ವಿಶೇಷವಾದ ಬೆಳಕಿನಿಂದ ನೋಡುಗರನ್ನು ಸೆಳೆಯುತ್ತವೆ.
ಮಹಾರಾಜರ ನೆಚ್ಚಿನ ತಾಣ
ಹಿಂದಿನ ಕಾಲದಲ್ಲಿ ದಟ್ಟ ಕಾಡುಗಳು ಇದ್ದುದರಿಂದ ಅನೇಕ ರಾಜ ಮಹಾರಾಜರು, ಪಾಳೆಗಾರರು ಈ ಪ್ರದೇಶಕ್ಕೆ ಬೇಟೆಗೆ ಬರುತ್ತಿದ್ದರು ಎನ್ನಲಾಗುತ್ತದೆ. ಮೈಸೂರು ಮಹಾರಾಜರು ಕೂಡ ಇಲ್ಲಿಗೆ ಬೇಟೆಗೆ ಬರುತ್ತಿದ್ದರಂತೆ. ಅವರಿಗೆ ಇದು ಅಚ್ಚುಮೆಚ್ಚಿನ ತಾಣವಾಗಿತ್ತು ಎನ್ನಲಾಗಿದೆ. ಒಮ್ಮೆ ಅವರು ಶಿಕಾರಿಗೆ ಚಂದ್ರಕಲಾ ಅರಣ್ಯ ಪ್ರದೇಶಕ್ಕೆ ಬಂದಾಗ ಅವರಿಗೆ ಹೆಣ್ಣುಮಗು ಜನನವಾದ ಸಂದೇಶ ಬಂದಿತಂತೆ. ಇದರಿಂದ ಸಂತಸಗೊಂಡ ಮೈಸೂರು ಮಹಾರಾಜರು ತಮ್ಮ ಮಗಳಿಗೆ ಚಂದ್ರಕಲಾ ಎಂದು ಹೆಸರಿಟ್ಟರಂತೆ.
ಶಿಕಾರಿಪುರ ಪ್ರಾದೇಶಿಕ ಅರಣ್ಯ ವಲಯದ ಒಟ್ಟು ವಿಸ್ತೀರ್ಣ 1,6034.60 ಹೆಕ್ಟೇರ್. ಈ ವ್ಯಾಪ್ತಿ 26 ಅರಣ್ಯ ಒಳಗೊಂಡಿದೆ. 5 ರಾಜ್ಯ ಅರಣ್ಯ, 6 ಕಿರು ಅರಣ್ಯ ಹಾಗೂ 3 ಟಿಂಬರ್ ರಿಸರ್ವ್ ಾರೆಸ್ಟ್, 3 ಸ್ಯಾಂಡಲ್ ರಿಸರ್ವ್ ಾರೆಸ್ಟ್, 9 ಬ್ಲಾಕ್ ಹಾಗೂ ಸೆಕ್ಷನ್-4 ಅರಣ್ಯಗಳಿಂದ ಒಳಗೊಂಡಿದೆ.
ನಾಲ್ಕು ನರ್ಸರಿಗಳು ಕಾರ್ಯನಿರ್ವಹಣೆ
ಶಿಕಾರಿಪುರ ತಾಲೂಕಿನಲ್ಲಿ ಅರಣ್ಯ ಇಲಾಖೆಯ ಒಟ್ಟು 4 ನರ್ಸರಿಗಳಿವೆ. ಶಿಕಾರಿಪುರ ವಲಯದ ಕುಮದ್ವತಿ, ಶಿರಾಳಕೊಪ್ಪ ವಲಯದ ದೇವಿಕೊಪ್ಪ, ಅಂಬ್ಲಿಗೊಳ ವಲಯ, ಶಿಕಾರಿಪುರ ಸಾಮಾಜಿಕ ಅರಣ್ಯ ವಲಯದ ನರ್ಸರಿಗಳಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚಿನ ಸಸಿಗಳನ್ನು ಬೆಳೆಸಲಾಗಿದೆ. ನರ್ಸರಿಗಳಲ್ಲಿ ಔಷೀಯ ಸಸ್ಯಗಳನ್ನು ಬೆಳೆಸಲಾಗುತ್ತಿದೆ. ಜತೆಗೆ ಬೆಲೆಬಾಳುವ ವೃಕ್ಷಗಳು, ಬಹೂಪಯೋಗಿ ವೃಕ್ಷಗಳು, ಹಣ್ಣಿನ ವೃಕ್ಷಗಳು ಮತ್ತು ಧಾರ್ಮಿಕ ನೆಲೆಗಟ್ಟಿನ ಮೇಲೆ ಉಪಯೋಗಿಸುವ ಸಸ್ಯಗಳನ್ನು ಕೂಡ ಬೆಳೆಸಲಾಗುತ್ತಿದೆ.
ಸಂತೆಯಲ್ಲಿ ಸಸಿ ಮಾರಾಟ
ರೈತರು, ಸಾರ್ವಜನಿಕರಿಗೆ ಅನುಕೂಲ ಆಗುವಂತಹ ಸಸ್ಯಗಳು ಅರಣ್ಯ ಇಲಾಖೆಯಲ್ಲಿವೆ. ಈ ಸಸಿಗಳನ್ನು ಶಿಕಾರಿಪುರದ ಸಂತೆಯಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ ಇತಿಹಾಸ ನಿರ್ಮಿಸಿದೆ. ಉಪಯೋಗ ಆಗಬಹುದಾದ ವಿವಿಧ ಜಾತಿಯ ಸಸ್ಯಗಳನ್ನು ರೈತರು ಖರೀದಿ ಮಾಡುತ್ತಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನರ್ಸರಿಗಳಲ್ಲಿ ಉತ್ತಮ ತಳಿಯ ವಿವಿಧ ಸಸಿಗಳಿವೆ. ರೈತರು ಮಾವು ಸೇರಿ ಆರ್ಥಿಕವಾಗಿ ಲಾಭ ತರುವ ಗಿಡಗಳನ್ನು ಖರೀದಿಸಬಹುದು. ಹೊಲ, ಗದ್ದೆ, ತೋಟದ ಬದುಗಳಲ್ಲಿ ಬೆಳೆಸಬಹುದು. ಕಾಡನ್ನು ಬೆಳೆಸುವ ನಿಟ್ಟಿನಲ್ಲಿ ಇಲಾಖೆಯಿಂದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ವಿವಿಧ ಸೇವಾ ಸಂಸ್ಥೆಗಳ ಗಿಡ ನೆಡುವ ಕಾರ್ಯಕ್ರಮಗಳಿಗೆ ಉಚಿತವಾಗಿ ಸಸಿಗಳನ್ನು ನೀಡಲಾಗಿದೆ. ಹೆದ್ದಾರಿಗಾಗಿ ಮರಗಳನ್ನು ಕಡಿದ ಜಾಗದಲ್ಲಿ ನೆಟ್ಟಿದ್ದ ಗಿಡಗಳು ಈಗ ದೊಡ್ಡದಾಗಿವೆ.
ರೇವಣಸಿದ್ದಯ್ಯ ಹಿರೇಮಠ್, ಆರ್‌ಎಫ್‌ಒ