ಜಿಲ್ಲೆ

ಚಂದಾಪುರ ಗ್ರಾಪಂನಲ್ಲಿ ಅವಿರೋಧ ಆಯ್ಕೆ

ಸೇಡಂ: ಎರಡನೇ ಅವಧಿಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಗುರುವಾರವೂ ಮುಂದುವರಿದಿದ್ದು, ಮೂರು ಗ್ರಾಪಂಗಳ ಪೈಕಿ ಒಂದರಲ್ಲಿ ಅವಿರೋಧ, ಎರಡರಲ್ಲಿ ಎಲೆಕ್ಷನ್ ಜರುಗಿದೆ.

ದುಗನೂರ ಗ್ರಾಪಂ ಅಧ್ಯಕ್ಷರಾಗಿ ನಾಗಮ್ಮ ಜಗದೇವಪ್ಪ, ಉಪಾಧ್ಯಕ್ಷರಾಗಿ ಸಾವಿತ್ರಮ್ಮ ಲಕ್ಷö್ಮಪ್ಪ ಆಯ್ಕೆಯಾದರು. ಅಧ್ಯಕ್ಷ ಗಾದಿಗೆ ನಾಗಮ್ಮ, ನಾಗೇಂದ್ರಪ್ಪ ಬಸಣ್ಣ ನಾಮಪತ್ರ ಸಲ್ಲಿಸಿದ್ದರು. ನಾಗಮ್ಮ 10 ವೋಟ್ ಪಡೆದು ಗೆಲುವು ಸಾಧಿಸಿದರು. ಉಪಾಧ್ಯಕ್ಷರಾಗಿ ಸಾವಿತ್ರಮ್ಮ ಅವಿರೋಧ ಆಯ್ಕೆಯಾದರು. ಕಲ್ಯಾಣಕುಮಾರ ಚುನಾವಣಾಧಿಕಾರಿಯಾಗಿದ್ದರು. ಬಿಜೆಪಿ ಬೆಂಬಲಿತರಿಗೆ ಅಧಿಕಾರ ಸಿಕ್ಕಿದ್ದರಿಂದ ಶಿವಕುಮಾರ ಪಾಟೀಲ್ ನೇತೃತ್ವದಲ್ಲಿ ಕಾರ್ಯಕರ್ತರು ಸಂಭ್ರಮಿಸಿದರು. ವೆಂಕಟೇಶ ಪಾಟೀಲ್, ಸಾಯಬೂ ದೇವನೂರ, ಶಿವಕುಮಾರ ಜಾಕಾ, ವಿನೋದ ಸಾಹುಕಾರ, ನಾಗಪ್ಪ ಸಾತಾಪುರ, ಮಲ್ಲಯ್ಯ ಬೆಂಡ್ಲೆ, ಜಗದೇವಪ್ಪ ಸಾಹುಕಾರ ನಾಚವಾರ, ಶೇಖಪ್ಪಗೌಡ ಮಲ್ಕಾಪಲ್ಲಿ, ನಾಗರೆಡ್ಡಿ ನಾಚವಾರ, ಸಿದ್ದು ಇದ್ದರು.

ಕೋಡ್ಲಾ ಗ್ರಾಪಂ ಅಧ್ಯಕ್ಷರಾಗಿ ಲಕ್ಷ್ಮೀ ಮಾರುತಿ, ಉಪಾಧ್ಯಕ್ಷರಾಗಿ ಜ್ಯೋತಿ ಪುರ್ಮಾ ಆಯ್ಕೆಯಾದರು. ಅಧ್ಯಕ್ಷ ಹುದ್ದೆಗೆ ಲಕ್ಷ್ಮೀ, ಮನೋಹರ ಹಣಮಂತ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ, ರಿಹಾನಾಬೇಗಂ ಮುಲ್ಲಾ ಸ್ಪರ್ಧಿಸಿದ್ದರು. ಲಕ್ಷ್ಮೀ ಮತ್ತು ಜ್ಯೋತಿ ಕ್ರಮವಾಗಿ 9, 10 ಮತ ಪಡೆದು ಗೆಲುವು ಸಾಧಿಸಿದರು. ರವಿರಾಜ್ ಚುನಾವಣಾಧಿಕಾರಿಯಾಗಿದ್ದರು. ಮುಖಂಡ ಶಿವಕುಮಾರ ಪಾಟೀಲ್ ತೆಲ್ಕೂರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ನಡೆಸಿದರು.

ಚಂದಾಪುರ ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶೈಲಜಾ ಮದಪ್ಪ, ಶೇಖರ ಕಲಾಲ್ ಅವಿರೋಧ ಆಯ್ಕೆಯಾದರು. ಶಿವಶರಣಪ್ಪ ಜೇವರ್ಗಿ ಚುನಾವಣಾ ಕರ್ತವ್ಯ ನಿರ್ವಹಿಸಿದರು. ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ನಂದಿಗಾಮ ನೇತೃತ್ವದಲ್ಲಿ ಕಾರ್ಯಕರ್ತರು ಸಂಭ್ರಮಿಸಿದರು.