ಸಕಲ ಸಿದ್ಧತೆ ಕೈಗೊಳ್ಳಲು ಎಡಿಸಿ ಕುಮಾರಸ್ವಾಮಿ ಸೂಚನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವಭಾವಿ ಸಭೆ
ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ನಗರದಲ್ಲಿ ಆ.19ರಂದು ಶಿವಶರಣ ನುಲಿಯ ಚಂದಯ್ಯ, 20ರಂದು ಶ್ರೀ ಬ್ರಹ್ಮಶ್ರೀ ನಾರಾಯಣ ಗುರು, 26ರಂದು ಶ್ರೀಕೃಷ್ಣ ಜಯಂತಿ ಆಚರಣೆಗೆ ಸಕಲ ಸಿದ್ಧತೆ ಅಧಿಕಾರಿಗಳು ಕೈಗೊಳ್ಳಬೇಕು ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿ, 19ರ ಬೆಳಗ್ಗೆ 9 ಗಂಟೆಗೆ ನೀಲಕಂಠೇಶ್ವರ ದೇವಾಲಯದಿಂದ ತರಾಸು ರಂಗಮಂದಿರವರೆಗೆ ನುಲಿಯ ಚಂದಯ್ಯ ಭಾವಚಿತ್ರದ ಮೆರವಣಿಗೆ ನಡೆಯಲಿದ್ದು, ನಂತರ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ಜಯಂತಿ ಆಚರಣೆಗೆ 50 ಸಾವಿರ ರೂ. ಒದಗಿಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಡಾ.ನಾಗವೇಣಿ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಕೊರಮ ಸಮಾಜದ ಅಧ್ಯಕ್ಷ ಕೃಷ್ಣಪ್ಪ,ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಚಿದಾನಂದ ಮತ್ತಿತರ ಅಧಿಕಾರಿಗಳು,ಸಮಾಜದ ಮುಖಂಡರು ಇದ್ದರು.
*ಸರಳ ಆಚರಣೆ: ಆ.20ಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸರಳ, ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಅಂದು ಬೆಳಗ್ಗೆ 11ಕ್ಕೆ ಕಾರ‌್ಯಕ್ರಮ ಏರ್ಪಡಿಸಲಾಗುವುದು. ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸವಿರುತ್ತದೆ ಎಂದು ಹೇಳಿದರು.
ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಜೀವನ್ ಮಾತನಾಡಿ, ಆರ್ಯ ಈಡಿಗರ ಸಂಘ ಸ್ಥಾಪನೆಯಾಗಿ 25 ವರ್ಷಗಳು ಪೂರೈಸಿದ್ದು, ಸ್ಮರಣಾರ್ಥ ನಾರಾಯಣ ಗುರುಗಳ ಜಯಂತಿಯನ್ನು ಸಮಾಜದಿಂದ ಅದ್ದೂರಿಯಾಗಿ ಆಚರಿಸಲಾಗುವುದು. ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗುವುದು. ಆದ್ದರಿಂದ ಸರ್ಕಾರದಿಂದ ಆಚರಿಸುವ ಜಯಂತಿ ಕಾರ‌್ಯಕ್ರಮವನ್ನು ಸರಳವಾಗಿ ಆಚರಿಸುವಂತೆ ಕೋರಿದರು.
ಖಜಾಂಚಿ ಬಸವರಾಜ್, ತಾಲೂಕು ಅಧ್ಯಕ್ಷ ಲಕ್ಷ್ಮೀಕಾಂತ್ ಮತ್ತಿತರ ಸಮಾಜದ ಮುಖಂಡರು, ಅಧಿಕಾರಿಗಳಿದ್ದರು.
*ಅದ್ದೂರಿ: ಆ.26ರಂದು ನಗರದಲ್ಲಿ ಶ್ರೀಕೃಷ್ಣ ಜಯಂತಿಯನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಬಿ.ಟಿ.ಕುಮಾರಸ್ವಾಮಿ ಹೇಳಿದರು. ಅಂದು ಮಧ್ಯಾಹ್ನ 12 ಗಂಟೆಗೆ ಹೊಳಲ್ಕೆರೆ ರಸ್ತೆ ಶ್ರೀಕೃಷ್ಣ ವೃತ್ತದ ಬಳಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ‌್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ ಎಂದರು.
ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಕಾರ‌್ಯದರ್ಶಿ ಆನಂದಪ್ಪ ಮತ್ತಿತರರು ಉಪಸ್ಥಿತರಿದ್ದರು.