ಬಾಬುರಾವ ಯಡ್ರಾಮಿ ಕಲಬುರಗಿ
ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದಂತೆ ನಿಜಾರ್ಥದಲ್ಲಿ ಕಲ್ಯಾಣವಾಗಿಸಲು ಮತ್ತು 371(ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ `ಪ್ರತ್ಯೇಕ ಸಚಿವಾಲಯ' (ಸೆಕ್ರೆಟರಿಯೇಟ್) ಸ್ಥಾಪನೆ ಮಾಡುವ ಸರ್ಕಾರದ ಭರವಸೆ ವರ್ಷವಾಗುತ್ತ ಬಂದರೂ ಘೋಷಣೆಯಲ್ಲೇ ಉಳಿಯುವಂತಾಗಿದೆ.
2019ರ ಸೆ.17ರಂದು ನಗರದಲ್ಲಿ ನಡೆದಿದ್ದ ಕಲ್ಯಾಣ ಕರ್ನಾಟಕ ಉದ್ಘೋಷಣೆ ಹಾಗೂ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಜತೆಗೆ 371(ಜೆ) ಅಭಿವೃದ್ಧಿ ಕೋಶ ಪ್ರಾದೇಶಿಕ ಕಚೇರಿಯನ್ನು ಸಹ ಆರಂಭಿಸುವುದಾಗಿ ಘೋಷಿಸಿದ್ದರು. ಆದರೀಗ ಮತ್ತೊಂದು ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಸಿದ್ಧತೆ ಶುರುವಾಗಿದ್ದರೂ ಈ ಬಗ್ಗೆ ಯಾರೊಬ್ಬರೂ ಚಕಾರ ಎತ್ತದಿರುವುದು ಸೋಜಿಗ ಎನಿಸಿದೆ.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳನ್ನು ಹೊಂದಿರುವ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಿಸಿದ ಮಾತ್ರಕ್ಕೆ ಯಾವುದೇ ಫಾಯಿದಾ ಇಲ್ಲ. ಪ್ರತ್ಯೇಕ ಸಚಿವಾಲಯ ಸ್ಥಾಪಿಸಿದರೆ ಮಾತ್ರ ಅಭಿವೃದ್ಧಿ ವೇಗ ಹೆಚ್ಚಲಿದೆ. ಜತೆಗೆ ಕೆಕೆಆರ್ಡಿಬಿ ಬಲವೂ ಇನ್ನಷ್ಟು ಹೆಚ್ಚಾಗಲಿದೆ ಎಂಬ ಹೋರಾಟಗಾರರ ಹಾಗೂ ಸಾರ್ವಜನಿಕರ ನಿರೀಕ್ಷೆಗೆ ಸ್ಪಂದನೆ ಕಾಣದಾಗಿದೆ.
371(ಜೆ) ಪರಿಣಾಮಕಾರಿ ಜಾರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೊಂಡರೆ ಈ ಭಾಗದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕೆಲಸಗಳು, ಹೊಸ ನೇಮಕಾತಿ, ಬಡ್ತಿ, ಎಲ್ಲ ಇಲಾಖೆಗಳಲ್ಲಿ ಕಕ ಕೋಟಾ ಮತ್ತು ಕಕಯೇತರ ಸಿಬ್ಬಂದಿ ನಿರ್ವಹಣೆ, ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕಾಲಕಾಲಕ್ಕೆ ಬದಲಾವಣೆ, ಜನರ ಭಾವನೆಯಂತೆ ಹೊಸ ಯೋಜನೆಗಳನ್ನು ರೂಪಿಸಿ ಅನುಮೋದನೆ ಪಡೆಯುವಂಥ ಕೆಲಸಗಳಿಗಾಗಿ ರಾಜಧಾನಿಗೆ ಅಲೆಯುವುದು ತಪ್ಪಲಿದೆ. ಜತೆಗೆ ಕಚೇರಿ ಕೆಲಸ ಕಾರ್ಯಗಳು ಚುರುಕುಗೊಳ್ಳಲಿವೆ. ಜಿಡಿಪಿ ಕುಸಿತ, ಆಥರ್ಿಕ ಸಂಕಷ್ಟದಂಥ ಸದ್ಯದ ಸ್ಥಿತಿಗತಿ ಗಮನಿಸಿದರೆ ಪ್ರತ್ಯೇಕ ಸಚಿವಾಲಯ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಗೋಚರಿಸುತ್ತಿದೆ.
ಲಕ್ಷೃ ಕೊಡಲಿಲ್ಲ, ಉಸ್ತುವಾರಿ ಗಮನ ಸೆಳೆಯಲಿಲ್ಲ
ಕಳೆದ ಸೆಪ್ಟೆಂಬರ್ನಲ್ಲಿ ಸಿಎಂ ಪ್ರತ್ಯೇಕ ಸಚಿವಾಲಯ ಘೋಷಿಸಿದ್ದಾರೆ. ಆದರೆ ಜಿಲ್ಲೆಯವರಾರೂ ಸಚಿವರು ಇಲ್ಲದ್ದರಿಂದ ಸರಿಯಾಗಿ ಫಾಲೋಅಪ್ ಮಾಡುವ ಗೋಜಿಗೆ ಯಾರೂ ಹೋಗಲಿಲ್ಲ. ಬಿಜೆಪಿ ಶಾಸಕರು ಸಹ ಮಂತ್ರಿಯಾಗುವ ಗುಂಗಿನಲ್ಲೇ ಓಡಾಡಿದರೆ ಹೊರತು, ಇದರತ್ತ ಚಿತ್ತ ಹರಿಸಲಿಲ್ಲ. ಇನ್ನು ನಮ್ಮೂರಿನವರಲ್ಲದ ಉಸ್ತುವಾರಿ ಸಚಿವರು ಬಂದ ಪುಟ್ಟಾ.. ಹೋದ ಪುಟ್ಟಾ ಎಂಬಂತೆ ನೆನಪಾದಾಗೊಮ್ಮೆ ಕಲಬುರಗಿಗೆ ಬಂದು ಹೋಗುತ್ತಿದ್ದಾರೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹೊತ್ತಿನಲ್ಲೂ ಹಾಗೆಯೇ ಆಯಿತು. ಅದರಲ್ಲೂ ಕರೊನಾ ಅಟ್ಟಹಾಸ ಶುರುವಾದ ಬಳಿಕ ಜಿಲ್ಲೆಯ ಕಡೆಗೆ ಎರಡ್ಮೂರು ಸಲ ಮಾತ್ರ ಬಂದು ಹೋದರು. ಕರೊನಾ ನಿಯಂತ್ರಣ ಸಭೆ ನಡೆಸಿದ್ದನ್ನು ಬಿಟ್ಟರೆ, ಉಳಿದಂತೆ ಅಭಿವೃದ್ಧಿ ಕೆಲಸಗಳತ್ತ ಯಾರೂ ಲಕ್ಷೃ ಕೊಡಲಿಲ್ಲ ಎಂಬುದು ಜನಾಭಿಪ್ರಾಯ.
ಕಳೆದ ಸಲ ಕಲ್ಯಾಣ ಕನರ್ಾಟಕ ಉತ್ಸವದಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿಗಳು ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಘೋಷಿಸಿದ್ದರು. ಆಗ ಪ್ರವಾಹ ಬಂದಿತು. ನಂತರ ಸಾಹಿತ್ಯ ಸಮ್ಮೇಳನ ಸಿದ್ಧತೆ, ಬಳಿಕ ಕರೊನಾ ಅಬ್ಬರದಿಂದ ವಿಳಂಬವಾಗಿದೆ. ಈ ವಿಷಯವನ್ನು ಸಿಎಂ ಯಡಿಯೂರಪ್ಪ ಗಮನಕ್ಕೆ ತಂದು ಸಚಿವಾಲಯ ಆರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ.
| ದತ್ತಾತ್ರೇಯ ಪಾಟೀಲ್ ರೇವೂರ
ಕೆಕೆಆರ್ ಡಿಬಿ ಅಧ್ಯಕ್ಷ
ಈ ಭಾಗದ ಪ್ರಗತಿಗಾಗಿ ಘೋಷಣೆ ಮಾಡಿದ್ದ ಪ್ರತ್ಯೇಕ ಸಚಿವಾಲಯ ಆರಂಭಿಸುವ ವಿಚಾರ ನನೆಗುದಿಗೆ ಬಿದ್ದಿದೆ. ಮುಖ್ಯಮಂತ್ರಿಗಳು ಘೋಷಿಸಿದ್ದ ಭರವಸೆ ಇನ್ನೂ ಈಡೇರಿಲ್ಲ. ಈ ನಿಟ್ಟಿನಲ್ಲಿ ಗಮನಹರಿಸುವ ಮೂಲಕ ಕಲ್ಯಾಣ ಕರ್ನಾಟಕ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು.
| ಡಾ.ಅಜಯಸಿಂಗ್
ವಿಧಾನಸಭೆ ಪ್ರತಿಪಕ್ಷ ಮುಖ್ಯ ಸಚೇತಕ