ಜಿಲ್ಲೆ

ಘಾಟಿಯಲ್ಲಿ ದನಗಳ ಜಾತ್ರೆ ಮೆರುಗು, ತರಹೇವಾರಿ ಹೋರಿಗಳು, ಕರೊನಾ ಮುಂಜಾಗ್ರತಾ ಕ್ರಮಕ್ಕೆ ಒತ್ತು, ಜ.8ರಂದು ಬ್ರಹ್ಮರಥೋತ್ಸವ

ತೂಬಗೆರೆ: ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಮಂಗಳವಾರದಿಂದ ದನಗಳ ಜಾತ್ರೆ ಆರಂಭವಾಗಿದ್ದು, ನೆರೆ ಜಿಲ್ಲೆ ಹಾಗೂ ಪಕ್ಕದ ರಾಜ್ಯಗಳಿಂದಲೂ ತರಹೇವಾರಿ ದನಗಳು ಬರುತ್ತಿವೆ.

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹೆಚ್ಚುತ್ತಿದ್ದರೂ ಇಂದಿಗೂ ಹಲವೆಡೆ ಕೃಷಿಗೆ ದನಗಳನ್ನೇ ಅವಲಂಬಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ದನಗಳ ಜಾತ್ರೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಈ ಹಿಂದೆ ರಾಸುಗಳಿಗೆ ಹರಾಜು ಪ್ರತಿಕ್ರಿಯೆ ನಡೆಸಿ ಸುಂಕ ವಿಧಿಸುವ ಪ್ರಕ್ರಿಯೆ ನಡೆದುಕೊಂಡು ಬಂದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸುಂಕ ವಿಧಿಸುತ್ತಿಲ್ಲ. ದೇವಾಲಯಕ್ಕೆ ತೆರಳುವ ವಾಹನಗಳಿಗೆ ಮಾತ್ರ ದೇವಾಲಯದ ಆಡಳಿತ ಮಂಡಳಿ ಸುಂಕ ವಸೂಲಿ ಮಾಡುತ್ತದೆ. ಕುಡಿಯುವ ನೀರು, ವಿದ್ಯುತ್ ದೀಪಗಳು ವ್ಯವಸ್ಥೆಯನ್ನು ಆಡಳಿತ ಮಂಡಳಿ ನಿರ್ವಹಿಸುತ್ತದೆ, ಪಶು ಇಲಾಖೆ ವತಿಯಿಂದ ತಾತ್ಕಾಲಿಕವಾಗಿ ಆಸ್ಪತ್ರೆ ತೆರೆದು ಲಸಿಕೆ ನೀಡಲಾಗುತ್ತಿದೆ.

ಬಹುಮಾನವೂ ಉಂಟು: ಉತ್ತಮ ತಳಿ ರಾಸುಗಳಿಗೆ ಬಹುಮಾನ ನೀಡುವ ಸಂಪ್ರದಾಯ ಮುಂದುವರಿಸಿಕೊಂಡು ಬರಲಾಗಿದೆ. ಅಮೃತ್ ಮಹಲ್, ಹಳ್ಳಿಕಾರ್ ಮತ್ತಿತರ ರಾಸುಗಳು ಬಹುಮಾನ ಗಳಿಸಲು ಸ್ಪರ್ಧೆಯೊಡ್ಡುವುದು ಇಲ್ಲಿನ ವಿಶೇಷಗಳಲ್ಲೊಂದಾಗಿದೆ.

ಮುಂಜಾಗ್ರತಾ ಕ್ರಮವಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಜ.8ರಂದು ನಡೆಯುವ ಬ್ರಹ್ಮರಥೋತ್ಸವಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೃಷ್ಣಪ್ಪ, ಘಾಟಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಈಗಾಗಲೇ ಎಲ್ಲ ಕಡೆ ಓಮಿಕ್ರಾನ್ ಆತಂಕವಿರುವುದರಿಂದ ದನಗಳ ಜಾತ್ರೆ ಹಾಗೂ ರಥೋತ್ಸವದಲ್ಲಿ ಕರೊನಾ ಮುಂಜಾಗ್ರತೆ ವಹಿಸಬೇಕಿದೆ. ಈ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಅಧಿವೇಶನ ಮುಗಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ನಿಸರ್ಗ ನಾರಾಯಣಸ್ವಾಮಿ, ಶಾಸಕ