ಬೇಲೂರು: ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿಯು ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಜಿಲ್ಲಾಧಿಕಾರಿ ಆದೇಶದಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಪುರಸಭೆ ಸಿಬ್ಬಂದಿ ಜತೆಗೂಡಿ ಶನಿವಾರ ತೆರವುಗೊಳಿಸಿದರು.
ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಾಗದಲ್ಲಿ ಎರಡು ತಿಂಗಳ ಹಿಂದಷ್ಟೆ ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿಯಿಂದ ಲಕ್ಷಾಂತರ ರೂ. ವೆಚ್ಚ ಮಾಡಿ ಅಕ್ರಮವಾಗಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡಲಾಗಿತ್ತು. ಈ ನಡುವೆ ಜಾಗದ ವಿಷಯವಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಘನತ್ಯಾಜ್ಯ ಘಟಕ ತೆರವು ಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಪುರಸಭೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ಘಟಕವನ್ನು ತೆರವುಗೊಳಿಸಿದರು.
ಸೂಕ್ತ ಕ್ರಮ ಅಗತ್ಯ: ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಮತ್ತು ಅಧಿಕಾರಿಗಳು ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಾಗದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಎಂಟು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ಇಂದು ತೆರವುಗೊಳಿಸಿದ್ದು ಸರಿಯಲ್ಲ. ಇಲ್ಲಿ ಸಾರ್ವಜನಿಕರ ತೆರಿಗೆ ಹಣ ಈ ರೀತಿ ಪೋಲಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಾಗ ಎಂದು ತಿಳಿದಿದ್ದರೂ ಅಲ್ಲಿಯೇ ಘನತ್ಯಾಜ್ಯ ಘಟಕ ನಿರ್ಮಿಸಿದವರ ವಿರುದ್ಧ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಾಗವೆಂದು ಗೊತ್ತಿದ್ದರೂ ದೇಗುಲ ವ್ಯವಸ್ಥಾಪನಾ ಸಮಿತಿಯವರು ಅಲ್ಲಿ ಘನತ್ಯಾಜ್ಯ ಘಟಕ ನಿರ್ಮಿಸಿದ್ದು ಸರಿಯಲ್ಲ. ಇವರು ತಮ್ಮದೇ ದೇಗುಲದ ಜಾಗದಲ್ಲಿ ಘಟಕ ನಿರ್ಮಿಸಿದ್ದರೆ ಲಕ್ಷಾಂತರ ರೂ, ನಷ್ಟವಾಗುತ್ತಿರಲಿಲ್ಲ. ಈ ಘಟನೆಗೆ ಯಾರೂ ಕಾರಣರೋ ಅವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಘಟನೆಯಿಂದ ಹೋರಾಟ ಅನಿವಾರ್ಯ:
ವಿ.ಎಸ್.ಭೋಜೇಗೌಡ, ಕರವೇ (ಪ್ರವೀಣ್‌ಶೆಟ್ಟಿ)ತಾಲೂಕು ಅಧ್ಯಕ್ಷ ಬೇಲೂರು