ಬಸವಕಲ್ಯಾಣದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಸಂವಿಧಾನ ದಿನ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಸಿಯುಕೆ ಪ್ರಾಧ್ಯಾಪಕ ಡಾ.ಕಿರಣ ಗಾಜನೂರು ಉದ್ಘಾಟಿಸಿದರು. ಡಾ.ಮಲ್ಲಿಕಾರ್ಜುನ ಲಕಶೆಟ್ಟಿ, ಡಾ.ಶಿವಾಜಿ ಮೇತ್ರೆ, ಡಾ.ಭೀಮಾಶಂಕರ ಬಿರಾದಾರ, ಮಾಧವಮೂರ್ತಿ ಇದ್ದರು. 
ಜಿಲ್ಲೆ

ಘನತೆ ಬದುಕಿಗೆ ಬೇಕು ಸಂವಿಧಾನ

ಬಸವಕಲ್ಯಾಣ: ಸಂವಿಧಾನವನ್ನು ಬದುಕಿನ ಭಾಗವಾಗಿ ಪರಿಗಣಿಸಿದಾಗಲೇ ಅದರ ಅರ್ಥ, ಮಹತ್ವ ತಿಳಿಯುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಕಿರಣ ಗಾಜನೂರು ಹೇಳಿದರು.

ಸಂವಿಧಾನ ದಿನ ನಿಮಿತ್ತ ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂವಿಧಾನದ ಪ್ರಸ್ತುತತೆ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ದೇಶದ ಪ್ರತಿಯೊಬ್ಬರೂ ಘನತೆಯಿಂದ ಬದುಕು ನಡೆಸಲು ಸಂವಿಧಾನದ ಅಗತ್ಯವಿದೆ. ಶಿಕ್ಷಣ, ಆಹಾರ, ಆರೋಗ್ಯ ಮತ್ತು ಉದ್ಯೋಗದ ಮೂಲಕ ದೇಶದ ನಾಗರಿಕರಿಗೆ ಘನತೆಯ ಬದುಕು ನೀಡಬೇಕೆಂದು ಸರ್ಕಾರಗಳಿಗೆ ಸಂವಿಧಾನ ನಿರ್ದೇಶಿಸುತ್ತದೆ ಎಂದರು.

ಎಲ್ಲ ಪ್ರಜೆಗಳಿಗೆ ಅಭಿವ್ಯಕ್ತಿ ಮತ್ತು ಜೀವಿಸುವ ಸ್ವಾತಂತ್ರ್ಯ, ನ್ಯಾಯ, ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಮಾನತೆ ಕೊಟ್ಟರೆ ಭ್ರಾತೃತ್ವ ಬೆಳೆಯುತ್ತದೆ. ಆ ಮೂಲಕ ದೇಶವನ್ನು ಸದೃಢ ಮಾಡಬಹುದೆಂದು ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಅಡಕವಾಗಿದೆ ಎಂದು ಹೇಳಿದರು.

ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಸಂವಿಧಾನದ ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳ ಅಧ್ಯಯನದಿಂದ ಜ್ಞಾನ ವೃದ್ಧಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಸಂವಿಧಾನ ಅರ್ಥೈಸಿಕೊಂಡು ಅನುಸರಿಸಿಕೊಳ್ಳುವಲ್ಲಿ ವಿಫಲರಾದರೆ ಅಪಾಯ ಎದುರಾದಂತೆ. ಶರಣರ ಕನಸಿನ ಲೋಕ, ಸಮ ಸಮಾಜದ ಆಶಯ ಭಾರತೀಯ ಸಂವಿಧಾನದ ತಾತ್ವಿಕತೆಯಾಗಿದೆ ಎಂದರು.

ಸಂಸ್ಥೆ ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕಶೆಟ್ಟಿ ಮಾತನಾಡಿ, ಅಧ್ಯಯನ ಮೂಲಕ ಪ್ರತಿಯೊಬ್ಬರೂ ಸಂವಿಧಾನದ ಮಹತ್ವ ಅರಿಯಬೇಕು ಎಂದು ಸಲಹೆ ನೀಡಿದರು.

ಕಲಬುರಗಿ ಎನ್‌ವಿ ಕಾಲೇಜು ಅಧ್ಯಾಪಕ ಡಾ.ಶಿವಾಜಿ ಮೇತ್ರೆ ಮಾತನಾಡಿ, ಸಂವಿಧಾನದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮಾಧವಮೂರ್ತಿ, ರಮ್ಯಾ ಗಾಜನೂರು, ವಿವೇಕಾನಂದ ಶಿಂಧೆ, ನಾಗವೇಣಿ ವಟಗೆ, ಅಶೋಕರೆಡ್ಡಿ ಗದಲೆಗಾಂವ, ಪ್ರಭಾಕರ ನವಗಿರೆ ಉಪಸ್ಥಿತರಿದ್ದರು. ಡಾ.ಶಾಂತಲಾ ಪಾಟೀಲ ಸ್ವಾಗತಿಸಿದರು. ಗಂಗಾಧರ ಸಾಲಿಮಠ ವಂದಿಸಿದರು. ಚನ್ನಬಸಪ್ಪ ಗೌರ ನಿರೂಪಣೆ ಮಾಡಿದರು. ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಬರೆದ ಸಂವಿಧಾನ ಓದು ಕೃತಿಯನ್ನು ಡಾ.ಕಿರಣ ಗಾಜನೂರು ವಿದ್ಯಾರ್ಥಿಗಳಿಗೆ ನೀಡಿದರು.