ಜಿಲ್ಲೆ

ಘಟಸ್ಥಾಪನೆಯೊಂದಿಗೆ ನವರಾತ್ರಿ ಸಂಭ್ರಮ ಶುರು

ಕಲಬುರಗಿ: ನವರಾತ್ರಿ ಹಬ್ಬದ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ. ನಗರ ಸೇರಿ ಜಿಲ್ಲಾದ್ಯಂತ ದಸರಾ ಮತ್ತು ನಾಡ ಹಬ್ಬದ ಝಲಕ್ ಜೋರಾಗಿದೆ. ಶಕ್ತಿ ದೇವತೆಯಾಗಿರುವ ದೇವಿ ಆರಾಧನೆ ಶ್ರದ್ಧಾ ಭಕ್ತಿಯಿಂದ ನಡೆದಿದೆ. ಮನೆಗಳಲ್ಲಿ ಘಟಸ್ಥಾಪನೆ, ದೀಪ ಹಾಕುವುದು ಇತರ ಧಾರ್ಮಿಕ ಕಾರ್ಯಕ್ರಮಗಳು ಶುರುವಾಗಿದೆ. ದೇವಾಲಯಗಳಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಿದ್ದನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದಾರೆ. ಎಲ್ಲೂ ಬರದ ಕರಿನೆರಳು ಹಬ್ಬದ ಮೇಲೆ ಆವರಿಸಿಲ್ಲ.

ನಗರದ ಹಲವೆಡೆ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡುವ ಕಾರ್ಯ ಭಾನುವಾರ ಬೆಳಗ್ಗೆಯಿಂದ ರಾತ್ರಿವರೆಗೂ ಭರ್ಜರಿಯಾಗಿ ಜರುಗಿತು. ಒಂಬತ್ತು ದಿನದ ವಿಶಿಷ್ಟ ಉತ್ಸವ. ಹಬ್ಬ ಆಚರಿಸುವ ಮನೆಗಳಲ್ಲಿ ಎಲ್ಲಿಲ್ಲದ ಸಂಭ್ರಮ ಕಂಡು ಬರುತ್ತಿದೆ. ಇನ್ನು ಮನೆಗಳಲ್ಲಿ ಬೆಳಗ್ಗೆಯಿಂದಲೇ ದೇವಿಗೆ ವಿಶೇಷ ಪೂಜೆ, ಆರಾಧನೆ ಮಾಡಲಾಯಿತು. ಶಕ್ತಿ ದೇವತೆ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಿ ಎಲ್ಲರನ್ನು ರಕ್ಷಿಸು, ಬರ ನೀಗಿಸಿ ಎಲ್ಲರಿಗೂ ಒಳಿತಾಗಲಿ ಭಕ್ತರು ದೇವಿಗೆ ಮೊರೆ ಹೋಗುತ್ತಿದ್ದಾರೆ.

ದುಷ್ಟ ಶಕ್ತಿಗಳ ಸಂಹಾರಕ್ಕಾಗಿ ಆದಿಶಕ್ತಿ ದೇವತೆ ಅವತರಿಸಿ ಧರೆಗೆ ಬಂದು ಕೆಟ್ಟ ಶಕ್ತಿಗಳನ್ನು ಸಂಹಾರ ಮಾಡಿದ್ದರ ಸ್ಮರಣೆ ಮತ್ತು ನಾಡಹಬ್ಬ ನವರಾತ್ರಿ ಉತ್ಸವ ವೈಭವ ಎಲ್ಲೆಡೆ ಜರ‍್ದಾರ್ ನಡೆದಿದೆ. ತೊಗರಿ ನಾಡು ಕಲಬುರಗಿ ಜಿಲ್ಲೆಯ ಭಕ್ತರು ಅಂಬಾಭವಾನಿ, ತುಳಜಾಭವಾನಿ, ಜಗದಂಬಾ, ಚಾಮುಂಡೇಶ್ವರಿ, ಯಲ್ಲಮ್ಮ, ಶ್ರೀದೇವಿ ಮೊದಲಾದ ಹೆಸರಿನಲ್ಲಿ ಶಕ್ತಿ ದೇವತೆ ಆರಾಧನೆ ಇತರ ಧಾರ್ಮಿಕ ಕಾರ್ಯಗಳನ್ನು ಶ್ರದ್ಧಾ ಭಕ್ತಿಯಿಂದ ಮಾಡುತ್ತಿದ್ದಾರೆ. ನಿರಂತರ ಜ್ಯೋತಿ ಪ್ರಜ್ವಲಿಸುತ್ತದೆ. ದೇವಿ ಎದುರು ಎಣ್ಣೆ ಜತೆ ತುಪ್ಪದ ದೀಪ ಉರಿಸಲಾಗುತ್ತಿದೆ.

ರಾಮಮಂದಿರ ಬಳಿಯ ಚಂದ್ರಶೇಖರ ಪಾಟೀಲ್ ರೇವೂರ ಸರ್ಕಲ್, ಹಳೆಯ ಜೇವರ್ಗಿ ರಸ್ತೆಯ ಪಂಚಶೀಲ ನಗರ, ಭವಾನಿ ತರುಣ ಸಂಘದವರು ಪಿ ಆ್ಯಂಡ್ ಟಿ ಕ್ವಾರ್ಟರ್ಸ್ ಮುಖ್ಯ ರಸ್ತೆ, ಶಹಾಬಜಾರದ ಮರಗಮ್ಮ ಗುಡಿ ಹತ್ತಿರ, ಬ್ರಹ್ಮಪುರ ವಿವಿಧ ಬಡಾವಣೆ, ನ್ಯೂ ರಾಘವೇಂದ್ರ ಕಾಲನಿ, ಗಂಜ್ ಕಾಲನಿ, ಸೇಡಂ ರಸ್ತೆ, ಹುಮನಾಬಾದ್ ರಸ್ತೆ ಮೊದಲಾದ ಕಡೆ ಸಾರ್ವಜನಿಕವಾಗಿ ದೇವಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.