ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಘಟಪ್ರಭಾ ನದಿ ಪ್ರವಾಹದಿಂದ ದೇವಸ್ಥಾನ, ಮನೆಗಳು ಜಲಾವೃತಗೊಂಡಿವೆ. 
ಜಿಲ್ಲೆ

ಘಟಪ್ರಭೆ ಅಬ್ಬರಕ್ಕೆ ಗ್ರಾಮಗಳು ಜಲಾವೃತ

ಬೆಳಗಾವಿ/ ಮೂಡಲಗಿ: ಪಶ್ಚಿಮ ಘಟ್ಟದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣಾ, ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಸುಮಾರು 24 ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ. ಅಲ್ಲದೆ, ನದಿಗಳಲ್ಲಿ ಅಪಾರ ಪ್ರಮಾಣದ ನೀರಿನ ಹರಿವು ಹಿನ್ನೆಲೆ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಒಂದು ವಾರದಿಂದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಘಟಪ್ರಭಾ ನದಿಗೆ 26,865 ಕ್ಯೂಸೆಕ್ ನೀರು ಬಿಡಲಾಗಿದೆ. ಪರಿಣಾಮ ಗೋಕಾಕ, ಮೂಡಲಗಿ ತಾಲೂಕಿನ ವ್ಯಾಪ್ತಿಯ ನದಿ ದಡದ ಗ್ರಾಮಗಳ ಸುತ್ತ ನೀರು ಆವರಿಸಿದೆ. ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳು ಬಂದ್ ಆಗಿದ್ದರಿಂದ ಜನರು ಸಂಚರಿಸಲು ಪರದಾಡುವಂತಾಗಿದೆ. ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ 30 ಮನೆಗಳು, ಲಕ್ಷ್ಮೀ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿವೆ. 20 ಕುಟುಂಬಗಳನ್ನು ಸಮೀಪ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿರುವ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ, ಜಾನುವಾರಗಳಿಗೆ ಮೇವು ಸೌಲಭ್ಯ ಕಲ್ಪಿಸಿಕೊಡಲಾಗಿದೆ.

ಸುಣಧೋಳಿ ಜಡಿಸಿದ್ದೇಶ್ವರ ದೇವಸ್ಥಾನ, ಢವೇಳಶ್ವರ ಗ್ರಾಮದ ಲಕ್ಷ್ಮೀ ದೇವಸ್ಥಾನಳಿಗೆ ನೀರು ನುಗ್ಗಿದೆ. ಈ ಗ್ರಾಮಗಳಲ್ಲಿ ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೆ, ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮುಧೋಳ ತಾಲೂಕಿನ ಘಟಪ್ರಭಾ ನದಿ ದಡದಲ್ಲಿರುವ ತೋಟದ ಮನೆಗಳು ಜಲಾವೃತವಾಗಿದ್ದು, ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಭಾನುವಾರ ವೇದಗಂಗಾ, ದೂದಗಂಗಾ ನದಿ, ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 1,85,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ಚಿಕ್ಕೋಡಿ, ರಾಯಬಾಗ, ಅಥಣಿ ಹಾಗೂ ಕಾಗವಾಡ ತಾಲೂಕಿನ ನದಿ ದಡದ ಗ್ರಾಮಗಳನ್ನು ನೀರು ಸುತ್ತುವರಿದಿದೆ. ಅಲ್ಲದೆ, ಕಬ್ಬಿನ ಬೆಳೆಗಳು ಸಂಪೂರ್ಣ ಜಲಾವೃತಗೊಂಡಿವೆ. ಈಗಾಗಲೇ ಜಿಲ್ಲಾಡಳಿತಗಳಿಗೆ ಘಟಪ್ರಭಾ ಮತ್ತು ಕೃಷ್ಣಾ ನದಿದಡದಲ್ಲಿ ಗ್ರಾಮಸ್ಥರು ಸುರಕ್ಷಿತವಾಗಿ ಸ್ಥಳಕ್ಕೆ ರವಾನಿಸಲಾಗುತ್ತಿದೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಕಡೆ ಕಾಳಜಿ ಕೇಂದ್ರಗಳನ್ನು ಆರಂಭಿಸಲು ಮತ್ತು ಜಾನುವಾರುಗಳಿಗೆ ಮೇವು, ನೀರು ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಕೃಷಿ ಪಂಪ್ ಸೆಟ್‌ಗಳಿಗೆ, ಜಲಾವೃತಗೊಂಡಿರುವ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಸಾರ್ವಜನಿಕರು ನದಿ ದಡದ ಪ್ರದೇಶಗಳಿಗೆ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.