ಘಟಪ್ರಭಾ ನದಿಗೆ ನೀರಿನ ಹರಿವು ಹೆಚ್ಚಳವಾಗಿದ್ದರಿಂದ ಢವಳೇಶ್ವರ ಬ್ಯಾರೇಜ್ ಜಲಾವೃತ ಹಂತಕ್ಕೆ ಬಂದಿರುವುದು. 
ಜಿಲ್ಲೆ

ಘಟಪ್ರಭಾ ನದಿಗೆ ಹರಿದು ಬಂದ ೨೩ ಸಾವಿರ ಕ್ಯೂಸೆಕ್ ನೀರು

ಬಾಗಲಕೋಟೆ: ಮಹಾರಾಷ್ಟçದ ಪಶ್ಚಿಮಘಟ್ಟದಲ್ಲಿ ಮುಂದುವರೆದ ಮಳೆ ಅಬ್ಬರದಿಂದಾಗಿ ಘಟಪ್ರಭಾ ನದಿಗೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಶುಕ್ರವಾರ ಅದು ೨೩೦೧೯ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಇದು ಇನ್ನಷ್ಟು ಪ್ರಮಾಣದಲ್ಲಿ ಹೆಚ್ಚಳವಾದರೆ ಜಿಲ್ಲೆಯ ಘಟಪ್ರಭಾ ನದಿ ಒಡಲಿನ ಸೇತುವೆಗಳು ಜಲಾವೃತವಾಗುವ ಸಂಭವ ಇದೆ.

ಹಿಡಕಲ್ ಜಲಾಶಯಕ್ಕೆ ೧೨೫೫೫ ಕ್ಯೂಸೆಕ್ ಒಳಹರಿವು ಇದ್ದು, ಅಲ್ಲಿಂದ ೮೫೭೮ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜೊತೆಗೆ ಮಾರ್ಕಂಡಯ್ಯ, ಬಳ್ಳಾರ ನಾಲೆ, ಹಿರಣ್ಯಕೇಶದಿಂದ ೧೪೪೪೧ ಕ್ಯೂಸೆಕ್ ಸೇರಿ ಟ್ಟು ೨೩೦೧೯ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ರಬಕವಿ-ಬನಹಟ್ಟಿ ತಾಲೂಕು ಹಾಗೂ ಮುಧೋಳ ತಾಲೂಕಿನಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿರುವ ಸೇತುವೆಗಳು ಜಲಾವೃತವಾಗುವ ಹಂತಕ್ಕೆ ಬಂದಿವೆ.

ಘಟಪ್ರಭಾ ನದಿಗೆ ೩೦ ರಿಂದ ೫೦ ಸಾವಿರ ಕ್ಯೂಸೆಕ್ ನೀರು ಹರಿದು ಬಂದರೆ ಅನೇಕ ಗ್ರಾಮಗಳಿಗೆ ನೀರು ನುಗ್ಗಿ ಪ್ರವಾಹ ಸನ್ನಿವೇಶ ನಿರ್ಮಾಣವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಘಟಪ್ರಭಾ ನದಿ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗುತ್ತಿದ್ದು, ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಜಮೀನುಗಳು ಜಲಾವೃತಗೊಂಡು ಬೆಳೆಗಳು ನಷ್ಟವಾಗುತ್ತಿವೆ.

ಪ್ರಸಕ್ತ ವರ್ಷ ಸದ್ಯ ಅಂತ ಸನ್ನಿವೇಶ ಸೃಷ್ಟಿಯಾಗಿಲ್ಲವಾದರೂ ದಿನೇ ದಿನೇ ನದಿಗೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚುತ್ತಿರುವುದು ಸಹಜವಾಗಿಯೇ ಮತ್ತೆ ಪ್ರವಾಹದ ಆತಂಕದಲ್ಲಿ ನದಿ ತೀರದ ಗ್ರಾಮಸ್ಥರು ಇದ್ದಾರೆ.

ಮಲಪ್ರಭಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿಲ್ಲ. ಅತ್ತ ಕೃಷ್ಣಾ ನದಿಗೆ ೧ ಲಕ್ಷ ಕ್ಯೂಸೆಕ್ ದಾಟಿದ್ದ ನೀರಿನ ಹರಿವು ಪ್ರಮಾಣ ಶುಕ್ರವಾರ ೯೬೪೦೦ ಕ್ಯೂಸೆಕ್‌ಗೆ ಇಳಿದಿದೆ. ಕೃಷ್ಣಾ ನದಿಗೆ ೨.೫ ಲಕ್ಷ ಕ್ಯೂಸೆಕ್ ವರೆಗೂ ನೀರು ಬಂದರೂ ಅದನ್ನು ನಿರ್ವಹಣೆ ಮಾಡಬಹುದಾಗಿದೆ. ಹೀಗಾಗಿ ಅಲ್ಲಿಯೂ ಸಹ ಪ್ರವಾಹದ ಆತಂಕ ಇಲ್ಲವಾಗಿದೆ. ಘಟಪ್ರಭಾ ನದಿ ವ್ಯಾಪ್ತಿಯಲ್ಲಿ ಸ್ವಲ್ಪ ಆತಂಕ ಇದೆ.