ಆಲಮಟ್ಟಿ ಜಲಾಶಯದಲ್ಲಿ ಜಲ ವೈಭವ. 
ಜಿಲ್ಲೆ

ಘಟಪ್ರಭಾ ತೀರದಲ್ಲಿ ಢವಢವ !

ಅಶೋಕ ಶೆಟ್ಟರ, ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ಜುಲೈ ಅಂತ್ಯ ಇಲ್ಲವೇ ಆಗಸ್ಟ್ ಮೊದಲ ವಾರ ಬಂತೆಂದರೆ ಕೃಷ್ಣ, ಘಟಪ್ರಭಾ ಮತ್ತು ಮಲಪ್ರಭಾ ನದಿ ತೀರದ ಜನರಿಗೆ ಢವಢವ ಶುರುವಾಗಿರುತ್ತದೆ. ಯಾವುದೇ ಕ್ಷಣದಲ್ಲಿ ಪ್ರವಾಹ ಸ್ಥಿತಿ ಉಂಟಾಗುವ ಮುನ್ಸೂಚನೆ ಇರುವ ಅವಧಿ ಇದಾಗಿದೆ.
ಕಳೆದ ೨೦೧೯ ರಿಂದ ಒಂದೇ ಒಂದು ವರ್ಷವೂ ಬಿಡುವಿಲ್ಲದೇ ಈ ಪ್ರದೇಶಗಳು ಪ್ರವಾಹಕ್ಕೆ ಸಿಲುಕುತ್ತಿವೆ. ಇದೀಗ ಮತ್ತದೆ ಸನ್ನಿವೇಶ ಸೃಷ್ಟಿಯಾಗಿದೆ. ಮುಖ್ಯವಾಗಿ ಘಟಪ್ರಭಾ ತೀರದಲ್ಲಿ ಇರುವ ಜಿಲ್ಲೆಯ ೭೧ ಪ್ರವಾಹ ಪೀಡಿತ ಗ್ರಾಮಗಳಿಗೆ ಇದೀಗ ಆತಂಕ ಹೆಚ್ಚಾಗಿದೆ...!!

ಈ ವರೆಗೂ ಘಟಪ್ರಭಾ ನದಿಗೆ ಹಿರಣ್ಯಕಾಶಿ, ಮಾರ್ಕಂಡಯ ಮತ್ತು ದೂಪದಾಳದಿಂದ ನೀರು ನದಿಗೆ ಬರುತ್ತಿತ್ತು. ಇದರಿಂದ ಅಬ್ಬಬ್ಬಾ ಎಂದರೂ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಗಳು ಜಲಾವೃತ ಆಗುತ್ತಿದ್ದವು. ಇದೀಗ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಡುತ್ತಿದ್ದು, ಇದೀಗ ಪ್ರವಾಹ ಸ್ಥಿತಿ ಎದುರಾಗುವುದು ಖಚಿತವಾಗಿದೆ.

ಬುಧವಾರ ಹಿಡಕಲ್ ಡ್ಯಾಂ ನಿಂದ ೧೦ ಸಾವಿರ ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದಾರೆ. ಜೊತೆಗೆ ಹಿರಣ್ಯಕೇಶಿ, ದೂಪದಾಳ, ಬಳ್ಳಾರಿನಾಲಾ ದಿಂದ ಈಗಾಗಲೇ ೨೬ ಸಾವಿರ ಕ್ಯೂಸೆಕ್ ಬರುತ್ತಿದೆ. ಇದರಿಂದ ಒಟ್ಟು ನದಿಗೆ ೩೬ ಸಾವಿರ ಕ್ಯೂಸೆಕ್ ನೀರು ಬರುತ್ತಿದ್ದು, ಇದು ಜಿಲ್ಲೆಯ ಘಟಪ್ರಭಾ ತೀರದ ಪ್ರವಾಹ ಉಂಟಾಗುವ ೭೧ ಗ್ರಾಮಗಳಲ್ಲಿ ಗಢಗಢ ಎನ್ನುವಂತೆ ಮಾಡಿದೆ.

ಸೇತುವೆ ಜಲಾವೃತ :
ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜಿಲ್ಲೆಯ ಬಹುತೇಕ ಸೇತುವೆಗಳು ಈಗ ಜಲಾವೃತವಾಗಿವೆ. ಜಮಖಂಡಿ ಉಪವಿಭಾಗದಲ್ಲಿ ಬರುವ ಢವಳೇಶ್ವರ, ನಂದಗಾವ್, ಮಿರ್ಜಿ, ಜಾಲಿಬೇರ, ಉತ್ತೂರ, ಚನ್ನಾಳ, ಜೀರಗಾಳ, ಜಂಬಗಿ ಕೆಡಿ, ಕಸಬಾ ಜಂಬಗಿ, ತಿಮ್ಮಾಪುರ, ಚಿಚಖಂಡಿ, ಅಲಗುಂಡಿ ಸೇರಿ ಅನೇಕ ಸೇತುವೆಗಳಲ್ಲಿ ಅಪಾಯಮಟ್ಟದಲ್ಲಿ ನೀರು ಹರಿದು ಬರುತ್ತಿದೆ. ಇವುಗಳ ಪೈಕಿ ತಿಮ್ಮಾಪುರ, ಚಿಚಖಂಡಿ, ಆಲಗುಂಡಿ ಹೊರತುಪಡಿಸಿ ಉಳಿದೆಲ್ಲ ಸೇತುವೆಗಳು ಸಂಪೂರ್ಣ ಜಲಾವೃತವಾಗಿವೆ.

ಇದೀಗ ಹಿಡಕಲ್ ಜಲಾಶಯದಿಂದಲೂ ನೀರು ಬಿಡುಗಡೆ ಮಾಡಿದ್ದರಿಂದ ಗುರುವಾರ ಇಲ್ಲವೇ ಶುಕ್ರವಾರ ಸಮಸ್ಯೆ ಮತ್ತಷ್ಟು ಉಲ್ಭಣಗೊಂಡು ಗ್ರಾಮಗಳಿಗೆ ನೀರು ನುಗ್ಗುವ ಅಪಾಯ ಇದೆ. ಇದೇ ಕಾರಣಕ್ಕೆ ಇದೀಗ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಅವರು ಸಂಬಂಧಪಟ್ಟ ತಾಲೂಕು ಅಧಿಕಾರಿಗಳಿಗೆ ತೀವ್ರ ನಿಗಾವಹಿಸಲು ನಿರ್ದೇಶನ ನೀಡಿದ್ದಾರೆ.

೩೦ ರಿಂದ ೫೦ ಸಾವಿರ ಕ್ಯೂಸೆಕ್ ಬಂದರೆ ಅಪಾಯ :
ಘಟಪ್ರಭಾ ನದಿಗೆ ೩೦ ಸಾವಿರದಿಂದ ೫೦ ಸಾವಿರ ಕ್ಯೂಸೆಕ್ ನೀರು ಹರಿದು ಬಂದರೆ ಪ್ರವಾಹ ಸ್ಥಿತಿ ಉಂಟಾಗುತ್ತದೆ. ಬುಧವಾರ ಒಟ್ಟು ೩೬ ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದು ಬರುತ್ತಿದ್ದು, ಇದೀಗ ಪ್ರವಾಸ ಸ್ಥಿತಿ ಎದುರಾಗಲಿದೆ. ಹಿಡಕಲ್ ಡ್ಯಾಂಗೆ ಸದ್ಯ ೩೧ ಸಾವಿರ ಕ್ಯೂಸೆಕ್ ಒಳಹರಿವು ಇದೆ. ಜಲಾಶಯ ಭರ್ತಿಗೆ ಬಂದಿದ್ದು, ಈಗ ಡ್ಯಾಂನಿಂದ ನೀರನ್ನು ಮೊದಲ ಹಂತದಲ್ಲಿ ೧೦ ಸಾವಿರ ಕ್ಯೂಸೆಕ್ ಹೊರಬಿಟ್ಟಿದ್ದಾರೆ. ಈ ಮೊದಲೇ ನದಿಗೆ ೨೬ ಸಾವಿರ ಕ್ಯೂಸೆಕ್ ಇದ್ದ ಹರಿವಿನ ಪ್ರಮಾಣ ಇದೀಗ ೩೬ ಸಾವಿರಕ್ಕೆ ಏರಿಕೆ ಆಗಿದೆ. ಹೀಗಾಗಿ ಹಿಡಕಲ್ ಜಲಾಶಯದಿಂದ ಹೊರ ಬಿಟ್ಟಿರುವ ನೀರು ಜಿಲ್ಲೆಗೆ ತಲುಪಿದಾಗ ಇಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಘಟಪ್ರಭಾ ನದಿ ತೀರದ ಜನರು ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಸುರಕ್ಷತೆಗಾಗಿ ಸ್ಥಳಾಂತರವಾಗಿ :
ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಕಡಿಮೆ ಆಗದ್ದರಿಂದ ಜಲಾಶಯಗಳ ಒಳಹರಿವು ಹೆಚ್ಚುತ್ತಿದ್ದು, ಇನ್ನೂ ಸಹ ಜಲಾಶಯದಿಂದ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರಲಿದೆ. ಹೀಗಾಗಿ ನದಿ ತೀರದ ಪ್ರವಾಹ ಭೀತಿ ಇರುವ ಗ್ರಾಮಸ್ಥರು ಮುಂಜಾಗೃತ ಕ್ರಮವಾಗಿ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಕೃಷ್ಣಾದಲ್ಲಿ ಹೆಚ್ಚಿದ ಅಬ್ಬರ:
ಒಂದು ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಉಂಟಾಗಿದ್ದರೆ ಮತ್ತೊಂದೆಡೆ ಕೃಷ್ಣಾ ತೀರದಲ್ಲೂ ಕ್ಷಣ ಕ್ಷಣಕ್ಕೂ ನೀರಿನ ಪ್ರಮಾಣ ಹೆಚ್ಚುತ್ತಿದೆ. ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಇನ್ನಿಲ್ಲದೇ ಸುರಿಯುತ್ತಿದ್ದು, ಇದೀಗ ಕಲ್ಲೋಳ ಬ್ಯಾರೇಜ್ ನಿಂದ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ೧.೫೧ ಲಕ್ಷ ಕ್ಯೂಸೆಕ್ ಒಳಹರಿವು ಇದೆ. ಅಷ್ಟೂ ನೀರನ್ನು ಹೊರಗಡೆ ಬಿಡಲಾಗುತ್ತಿದೆ. ಮತ್ತೊಂದೆಡೆ ಆಲಮಟ್ಟಿ ಜಲಾಶಯದಿಂದಲೂ ೨ ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು, ಕೂಡಲಸಂಗಮ ಕ್ಷೇತ್ರ ಸೇರಿದಂತೆ ಹುನಗುಂದ ತಾಲೂಕಿನ ಕೃಷ್ಣಾ ತೀರದ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ. ಆದರೆ, ನಾರಾಯಣಪುರ ಜಲಾಶಯದಿಂದ ಅಷ್ಟೆ ಪ್ರಮಾಣದಲ್ಲಿ ನೀರು ಹೊರಬಿಡುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ ಆತಂಕ ಕಡಿಮೆಯಾದರೂ ರಾಯಚೂರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಢವಢವ ಹೆಚ್ಚಿಸಲಿದೆ.

ಮುತ್ತೂರ ನಡುಗಡ್ಡೆಯ ಹತ್ತು ಮನೆ ಸ್ಥಳಾಂತರ :
ಹಿಪ್ಪರಗಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಕೃಷ್ಣಾ ನದಿಗೆ ಬಿಡಲಾಗುತ್ತಿದೆ. ಸದ್ಯ ೧.೫೧ ಲಕ್ಷ ಕ್ಯೂಸೆಕ್ ಹೊರಹರಿವು ಇದ್ದು, ಇದು ೨ ಲಕ್ಷ ದಾಟಿದಲ್ಲಿ ಜಮಖಂಡಿ ತಾಲೂಕಿನ ಮುತ್ತೂರ, ತುಬಚಿ ಮೊದಲು ಪ್ರವಾಹಕ್ಕೆ ಸಿಲುಕಲಿವೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರಿಗೆ ಜಮಖಂಡಿ ಉಪವಿಭಾಧಿಕಾರಿಗಳು ಹಾಗೂ ತಹಶೀಲ್ದಾರ ಅವರು ಮುತ್ತೂರ ನಡುಗಡ್ಡೆಯಿಂದ ಹತ್ತು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿಸಿದ್ದಾರೆ.