ವಿಶೇಷ ವರದಿ ಬಾಗಲಕೋಟೆ:
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಉಂಟು ಮಾಡುವ ರೀತಿಯಲ್ಲಿ ವರುಣ ಅಬ್ಬರಿಸುತ್ತಿಲ್ಲ. ಆದರೆ, ಮಹಾರಾಷ್ಟ್ರದಲ್ಲಿ ಮಳೆಯ ರುದ್ರನರ್ತನ ನಡೆದಿದ್ದು, ಇದರಿಂದ ಜಿಲ್ಲೆಯ ನದಿ ತೀರದ ಜನರಲ್ಲಿ ಮತ್ತೆ ಢವಢವ ಶುರುವಾಗಿದೆ...!!
ವಿಶೇಷವಾಗಿ ಘಟಪ್ರಭ ನದಿ ಗರ್ಜನೆ ಆರಂಭಿಸಿದೆ. ಇದರಿಂದ ರಬಕವಿ-ಬನಹಟ್ಟಿ, ಮುಧೋಳ, ಬೀಳಗಿ, ಬಾಗಲಕೋಟೆ ತಾಲೂಕಿನ ಘಟಪ್ರಭಾ ಸೇತುವೆಗಳು ಇದೀಗ ಒಂದರ ಬಳಿಕ ಮತ್ತೊಂದು ಜಲಾವೃತವಾಗುತ್ತಿವೆ. ದೂಪದಾಳ, ಮಾರ್ಕಂಡಯ, ಬಳ್ಳಾರಿನಾಲಾದಿಂದ ೨೧೫೦೦ ಕ್ಕೂ ಹೆಚ್ಚು ಕ್ಯೂಸೆಕ್ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿದೆ. ಇದರಿಂದ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ, ನಂದಗಾವ್, ಮುಧೋಳ ತಾಲೂಕಿನ ಮಿರ್ಜಿ, ಅತಾಪುರ-ಜಂಬಗಿ ಕೆಡಿ ಗ್ರಾಮಕ್ಕೆ ಸಂಪರ್ಕ ಸೇತುವೆ ಸಂಪೂರ್ಣ ಜಲಾವೃತವಾಗಿವೆ.
ಹೊಳೆಬಸವೇಶ್ವರ ದೇಗುಲ ಜಲದಿಗ್ಭಂಧನ
ಮುಧೋಳ ತಾಲೂಕಿನ ಮಾಚಕನೂರ ಹೊಳೆಬಸವೇಶ್ವರ ದೇಗುಲ ಜಲದಿಗ್ಭಂಧನಕ್ಕೆ ಒಳಗಾಗಿದೆ. ಹೀಗಾಗಿ ಮಂಗಳವಾರ ಭಕ್ತರು ನೀರಲ್ಲಿ ನಡೆದು, ಈಜಿಕೊಂಡು ಹೋಗಿ ದೇವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದುಕೊಂಡರು. ಹೊಳೆಬಸವೇಶ್ವರ ದೇವಾಲಯ ೨೦೧೯ರಿಂದ ಸತತವಾಗಿ ೬ನೇ ವರ್ಷವೂ ಘಟಪ್ರಭಾ ಅಬ್ಬರಕ್ಕೆ ಸಿಕ್ಕು ಜಲಾವೃತವಾಗುತ್ತಿದೆ. ಉಳಿದ ಸೇತುವೆಗಳು ಇದಕ್ಕೆ ಭಿನ್ನವಾಗಿಲ್ಲ.
ಬೀಳಗಿ ತಾಲೂಕಿನ ಅನಗವಾಡಿ ಬೃಹತ್ ಸೇತುವೆ ಕೆಳಭಾಗದಲ್ಲಿ ಇರುವ ಅನಗವಾಡಿ-ಬೂದಿಹಾಳ ಸೇತುವೆ ಜಲಾವೃತವಾಗಿದೆ. ಇದರಿಂದ ಕವಳ್ಳಿ, ಬೂದಿಹಾಳ, ಕುಂದರಗಿ, ಕಾತರಕಿ, ಮುಧೋಳಕ್ಕೆ ಹೋಗುವ ರಸ್ತೆ ಸಂಪರ್ಕ ಕಡಿತವಾಗಿದ್ದು, ಇದೀಗ ಜನರು ನುನಗ ಮಾರ್ಗವಾಗಿ ಸಂಚರಿಸಬೇಕಾಗಿದೆ.