ಬೆಳಗಾವಿ: ಗಡಿಭಾಗದಲ್ಲಿ ಕೆಲ ಹಾಲು ಸಂಗ್ರಹಣಾ ಘಟಕಗಳು (ಸಂಸ್ಥೆ) ನಿರ್ಧರಿತ ದರ ಕೊಡುವ ಬದಲಿಗೆ ಪ್ರತಿ ಲೀಟರ್‌ಗೆ 10 ರೂ. ನಿಂದ 15 ರೂ. ವಂಚಿಸುತ್ತಿದ್ದಾರೆ ಎಂದು ತಾಲೂಕಿನ ಬೆಳಗುಂದಿ ಕ್ರಾಸ್‌ನಲ್ಲಿರುವ ಗಣೇಶ ಹಾಲು ಉತ್ಪಾದನಾ ಕೇಂದ್ರದ ಮಾಲೀಕ ಉಮೇಶ (ಪ್ರವೀಣ) ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಗಣೇಶ ಹಾಲು ಉತ್ಪಾದನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಹಾಲು ಸಂಗ್ರಹಣಾ ಸಂಸ್ಥೆಗಳಿಗೆ ದರ ಪಟ್ಟಿ ನೀಡಲಾಗಿದ್ದರೂ ಆ ಪಟ್ಟಿಯನ್ನು ಬಹಳಷ್ಟು ಸಂಸ್ಥೆಗಳು ಅಂಟಿಸಿಲ್ಲ. ಆದ್ದರಿಂದ ಹಾಲು ಉತ್ಪಾದರಿಗೆ ನಷ್ಟವಾಗುತ್ತಿದೆ. ಹೀಗಾಗಿ ಗಣೇಶ ಹಾಲು ಉತ್ಪಾದನಾ ಕೇಂದ್ರದಿಂದ ಗ್ರಾಮಗಳಿಗೆ ಹೋಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ರೈತರು ಗ್ರಾಮಗಳಲ್ಲಿನ ಹಾಲು ಸಂಗ್ರಹಣಾ ಸಂಸ್ಥೆಗಳಿಗೆ ಹಾಲು ಕೊಡುತ್ತಾರೆ. ಸಂಸ್ಥೆ ಯಾವ ದರ ಕೊಡುತ್ತದೆಯೋ ಅದನ್ನು ಸ್ವೀಕರಿಸುತ್ತಿದ್ದಾರೆ. ಹಾಲನ್ನು ಅಳೆಯುವಲ್ಲಿ ಕಳ್ಳತನವಾಗುತ್ತಿದೆ. ಒಂದು ದಿನ 5 ಲೀಟರ್ ಹಾಲು ಮಾಪನ ವ್ಯತ್ಯಾಸವಾದರೆ 75 ರೂ. ನಷ್ಟವಾಗುತ್ತಿದೆ. ಕೆಲ ರೈತರು ಹಾಲು ಉತ್ಪಾದನಾ ಸಂಸ್ಥೆಗಳಿಂದ ಜೆರಾಕ್ಸ್ ರಸೀದಿ ಪರಿಶೀಲಿಸಿದಾಗ ಈ ಸತ್ಯ ಬಹಿರಂಗಗೊಂಡಿದೆ ಎಂದರು.
ಗಣೇಶ ಹಾಲು ಉತ್ಪಾದನಾ ಕೇಂದ್ರದಿಂದ 7.0 ಫ್ಯಾಟ್ ಇರುವ ಪ್ರತಿ ಲೀಟರ್ ಎಮ್ಮೆ ಹಾಲಿಗೆ 52 ರೂ. 50 ಪೈಸೆ ಕೊಡಲಾಗುತ್ತದೆ. 4.0 ಫ್ಯಾಟ್‌ನ ಪ್ರತಿ ಲೀಟರ್ ಆಕಳ ಹಾಲಿಗೆ 37 ರೂ. ಕೊಡಲಾಗುತ್ತದೆ. ಹೀಗೆ ರೈತರಿಗೆ ದರ ನೀಡುವಲ್ಲಿ ನಮ್ಮ ಹಾಲು ಉತ್ಪಾದನಾ ಕೇಂದ್ರದಿಂದ ಪಾರದರ್ಶಕವಾಗಿ ರೈತರಿಗೆ ಹಣ ನೀಡುತ್ತಿದ್ದೇವೆ. ನಾವು ರೈತರಿಗೆ ಪಾರದರ್ಶಕ ದರ ಹಾಗೂ ಬೋನಸ್ ಕೊಡುತ್ತೇವೆಯೋ ಅದೇ ರೀತಿ ರೈತರಿಗೆ ಬೇರೆ ಕಡೆಗಳಲ್ಲಿ ಸಿಗುತ್ತಿಲ್ಲ. ಮಾಪನದಲ್ಲಿ ದೋಷಗಳು ಇವೆ. ರೈತರು ತಮ್ಮ ಹಾಲಿನ ಫ್ಯಾಟ್ ಅನ್ನು ಬೇರೆ ಲ್ಯಾಬ್‌ನಲ್ಲಿ ಪರಿಶೀಲಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಕೆಲ ಸಂಸ್ಥೆಗಳು ನಷ್ಟದಲ್ಲಿವೆ ಎಂದು ಹೇಳುತ್ತಾರೆ. ಆದರೆ, ತಮ್ಮಲ್ಲಿಯ ದಾಖಲೆಗಳನ್ನು ತೋರಿಸುತ್ತಿಲ್ಲ. ಇನ್ನು ಮುಂದೆ ಗಣೇಶ ಹಾಲು ಉತ್ಪಾದನಾ ಕೇಂದ್ರದಿಂದ ಹಳ್ಳಿ ಹಳ್ಳಿಗಳಲ್ಲಿ ಸಭೆಗಳನ್ನು ಮಾಡಿ, ಜಾಗೃತಿ ಮೂಡಿಸಲಾಗುವುದು ಎಂದರು. ಗಣೇಶ ಹಾಲು ಉತ್ಪಾದನಾ ಕೇಂದ್ರದ ಸಂಸ್ಥಾಪಕ ಮೋತಿರಾಮ್ ದೇಸಾಯಿ, ವ್ಯವಸ್ಥಾಪಕ ಸುಧಾಕರ ಕೆರಟೆ ಇತರರಿದ್ದರು.