ಜಿಲ್ಲೆ

ಗ್ರಿಡ್ ಸ್ಥಾಪನೆಗೆ ಹಸಿರು ನಿಶಾನೆ

ಶಿರಸಿ: ತಾಲೂಕಿನ ಬನವಾಸಿ ಹಾಗೂ ಸುತ್ತಮುತ್ತಲಿನ ರೈತರು ಹಾಗೂ ಸಾರ್ವಜನಿಕರ ಅನುಕೂಲದ ಉದ್ದೇಶದಿಂದ ರೂಪಿಸಿರುವ ಹೊಸ ಉಪಕೇಂದ್ರ (ಗ್ರಿಡ್) ಸ್ಥಾಪನೆ ಕಾಮಗಾರಿಗೆ ವರ್ಷಗಳ ನಂತರ ಗುತ್ತಿಗೆ ಕರೆಯಲಾಗಿದೆ. ಇದು ನಿರಂತರವಾಗಿ ವಿದ್ಯುತ್ ವೋಲ್ಟೇಜ್ ಸಮಸ್ಯೆ ಎದುರಿಸುತ್ತಿದ್ದ ಬನವಾಸಿಗರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಬನವಾಸಿ ಹೋಬಳಿಯ ಜನಸಂಖ್ಯೆ ಅಂದಾಜು 50 ಸಾವಿರ. ಹೋಬಳಿಯ ಅರ್ಧದಷ್ಟು ಭಾಗಕ್ಕೆ ಶಿರಸಿ ಹಾಗೂ ಎಸಳೆ ಗ್ರಿಡ್​ನಿಂದ ವಿದ್ಯುತ್ ಪೂರೈಕೆಯಾಗುತ್ತದೆ. 33 ಕಿ.ಮೀ. ದೂರದಿಂದ ವಿದ್ಯುತ್ ಪೂರೈಕೆಯಾಗುವುದರಿಂದ ಅಲ್ಲಿನ ಜನರಿಗೆ ಪ್ರತಿದಿನವೂ ಲೋ ವೋಲ್ಟೇಜ್ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಹೊಸ ಗ್ರಿಡ್ ನಿರ್ವಿುಸಬೇಕೆಂಬುದು ಅಲ್ಲಿನ ಜನರ ದಶಕದ ಹಿಂದಿನ ಬೇಡಿಕೆಯಾಗಿತ್ತು. ಆದರೆ, ಹಲವು ಅಡೆತಡೆ ಬಂದ ಕಾರಣ ತೀರಾ ವಿಳಂಬವಾಗಿ ಕಾಮಗಾರಿಗೆ ಅನುಮತಿ ದೊರೆತಂತಾಗಿದೆ.
ವಿಳಂಬಕ್ಕೆ ಕಾರಣವೇನು?: ಬನವಾಸಿಯಲ್ಲಿ ಹೊಸ ಉಪಕೇಂದ್ರ ನಿರ್ವಿುಸಿರುವ ಸಂಬಂಧ ಸರ್ಕಾರದಿಂದ ಅನುಮತಿ ದೊರೆತು, 2012ರಲ್ಲಿ ರಾಜ್ಯ ಅರಣ್ಯ ಇಲಾಖೆ ಕಡಕೋಡದಲ್ಲಿ ಒಂದು ಹೆಕ್ಟೇರ್ ಅರಣ್ಯ ಭೂಮಿ ಮಂಜೂರು ಮಾಡಿತ್ತು. ಆ ಸಂದರ್ಭದಲ್ಲಿ ಚಂದ್ರಗುತ್ತಿಯಿಂದ ಯೋಜಿತ ಉಪಕೇಂದ್ರಕ್ಕೆ ಲೈನ್ ಎಳೆಯುವ ಯೋಜನೆ ರೂಪಿಸಲಾಗಿತ್ತು. ಆದರೆ, ಕಾಮಗಾರಿ ಆರಂಭಿಸುವಲ್ಲಿ ಕಾರಣಾಂತರಗಳಿಂದ ವಿಳಂಬವಾಯಿತು.
ಉಪ ಕೇಂದ್ರ ನಿರ್ವಣಕ್ಕೆ ಒಂದು ಹೆಕ್ಟೇರ್ ಹಾಗೂ ಲೈನ್ ಎಳೆಯಲು ಹೆಚ್ಚುವರಿ ಜಾಗ ಬೇಕಿತ್ತು. ಈ ಕಾರಣದಿಂದ ಕೇಂದ್ರ ಅರಣ್ಯ ಪರಿಸರ ಮಂತ್ರಾಲಯವು ರಾಜ್ಯ ಅರಣ್ಯ ಇಲಾಖೆಗೆ ಜಾಗ ಮಂಜೂರು ಅಧಿಕಾರ ಇಲ್ಲವೆಂದು ಹೇಳಿ ವಾಪಸ್ ಪಡೆಯುವಂತೆ ಆದೇಶಿಸಿತು. 2018ರ ಜನವರಿಯಲ್ಲಿ ಅರಣ್ಯ ಇಲಾಖೆ ಜಾಗ ವಾಪಸ್ ಪಡೆದ ಮೇಲೆ, 10.29 ಕೋಟಿ ರೂ. ವೆಚ್ಚದ ಉಪ ಕೇಂದ್ರ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿತ್ತು.
ಜಡೆ ಕೇಂದ್ರದಿಂದ ವಿದ್ಯುತ್: ಚಂದ್ರಗುತ್ತಿ ಮಾರ್ಗದ ಬದಲಾಗಿ, ಶಿವಮೊಗ್ಗ ಜಿಲ್ಲೆಯ ಜಡೆ ಕೇಂದ್ರದಿಂದ ವಿದ್ಯುತ್ ಲೈನ್ ಎಳೆಯುವ ಹೊಸ ಪ್ರಸ್ತಾವ ಸಿದ್ಧಪಡಿಸಿ, ಜಾಗ ಮಂಜೂರುಗೊಳಿಸುವಂತೆ ಕೇಂದ್ರ ಅರಣ್ಯ ಪರಿಸರ ಮಂತ್ರಾಲಯಕ್ಕೆ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿತ್ತು. 9.5 ಕಿ.ಮೀ. ದೂರದ ಈ ಮಾರ್ಗವು ಕೃಷಿಭೂಮಿ ಮೂಲಕ ಬರುವುದರಿಂದ ಕಾಡಿನ ಮರಗಳು ನಾಶವಾಗುವುದಿಲ್ಲ. ಸ್ಥಳ ನಕ್ಷೆ, ಜಾಗದ ಸ್ಪಷ್ಟನೆಗೆ ಸಂಬಂಧಿಸಿ ಪರಿಸರ ಮಂತ್ರಾಲಯವು 2019ರ ಜೂನ್ 17ರಂದು ಮಾಹಿತಿ ಕೇಳಿತ್ತು. ಇದನ್ನು ಹೆಸ್ಕಾಂ ಮತ್ತು ರಾಜ್ಯ ಸರ್ಕಾರದ ಮೂಲಕ ಸಲ್ಲಿಸಲಾಗಿತ್ತು. ಯೋಜನೆಯ ಸಾಧ್ಯಾಸಾಧ್ಯತೆ ಪರಿಶೀಲಿಸಿದ ಕೇಂದ್ರ ಅರಣ್ಯ ಪರಿಸರ ಮಂತ್ರಾಲಯ ಇತ್ತೀಚೆಗೆ ಕಾಮಗಾರಿಗೆ ಅವಕಾಶ ನೀಡಿದೆ. ಕಾರಣ ಇದೀಗ ಕಾಮಗಾರಿಯ ಗುತ್ತಿಗೆ ಕರೆಯಲಾಗಿದ್ದು, ಶೀಘ್ರದಲ್ಲಿ ಕೆಲಸ ಪ್ರಾರಂಭಗೊಳ್ಳಲಿದೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಬನವಾಸಿ ಹೋಬಳಿಯಲ್ಲಿ ನಿತ್ಯವೂ ವಿದ್ಯುತ್ ಸಮಸ್ಯೆಯಿದೆ. ನೀರಾವರಿಯನ್ನೇ ನಂಬಿದ ಈ ಭಾಗದ ರೈತರಿಗೆ ವಿದ್ಯುತ್ ಜೀವನಾಡಿಯಾಗಿದೆ. ಕಾರಣ ಸರ್ಕಾರದಿಂದ ಮಂಜೂರಾದ ಈ ಯೋಜನೆಗೆ ಕೂಡಲೆ ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಳಿಸಿ ಕೆಲಸ ಪ್ರಾರಂಭಿಸಿದರೆ ಈ ಭಾಗದವರಿಗೆ ಅನುಕೂಲ ಆಗಲಿದೆ.| ಶಿವಾಜಿ ಬನವಾಸಿ, ಸ್ಥಳೀಯ ನಿವಾಸಿಬನವಾಸಿಯಲ್ಲಿ 110/11 ಕೆ.ವಿ ಉಪಕೇಂದ್ರ ನಿರ್ವಣದೊಂದಿಗೆ ಬನವಾಸಿ ಸುತ್ತಲಿನ ಜನರ ವಿದ್ಯುತ್ ಸಮಸ್ಯೆ ಕೊನೆಯಾಗಲಿದೆ. ಅಲ್ಲದೆ, ಕೆರೆಗೆ ನೀರು ತುಂಬುವ 1ನೇ ಹಾಗೂ 2ನೇ ಹಂತದ ಯೋಜನೆಗಳ ಅನುಷ್ಠಾನಕ್ಕೂ ಸಹಾಯವಾಗಲಿದೆ. ಒಟ್ಟಾರೆ ಕೃಷಿಯಾಧಾರಿತ ಬನವಾಸಿ ಹೋಬಳಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾದರೆ ಈ ಭಾಗದ ಜನರು, ರೈತರು ನೆಮ್ಮದಿಯಿಂದ ಇರಲು ಸಾಧ್ಯ.| ಶಿವರಾಮ ಹೆಬ್ಬಾರ, ಜಿಲ್ಲಾ ಉಸ್ತುವಾರಿ ಸಚಿವ