ಚಿತ್ರದುರ್ಗ: 2011-12ನೇ ಸಾಲಿನಿಂದ ಗ್ಯಾಚ್ಯುಟಿ ಸೌಲಭ್ಯ ಜಾರಿಗೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ರಾಜ್ಯಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಕಿಯರ ಫೆಡರೇಷನ್ ಜಿಲ್ಲಾ ಸಮಿತಿ ಎಐಟಿಯುಸಿಯೊಂದಿಗೆ ಡಿಸಿ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಿತು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಿವೃತ್ತಿ ಉಪಧನ(ಗ್ರಾೃಚ್ಯುಟಿ)ಪಡೆಯಲು ಅರ್ಹರಿದ್ದಾರೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇವರ ಕೆಲಸ ಅರೆಕಾಲಿಕವಲ್ಲ, ಪೂರ್ಣ ಸಮಯ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಮುಖ್ಯ ನ್ಯಾಯಮೂರ್ತಿಗಳಾದ ಅಜಯ್ ರೆಸ್ಪೂಗಿ ಹಾಗೂ ಅಭಯ್ ಎಸ್. ಓಕಾ ಅವರ ನ್ಯಾಯ ಪೀಠ ಹೇಳಿದೆ.
ಹೀಗಿದ್ದರೂ ಕಾರ್ಯಕರ್ತೆಯರು, ಸಹಾಯಕಿಯರು ನಿಯಮಿತ ವೇತನ ಮತ್ತಿತರ ಸವಲತ್ತುಗಳಿಂದ ವಂಚಿತರಾಗಿದ್ದಾರೆ. ಅವರ ಕೆಲಸ ಶಾಸನ ಬದ್ಧವಾಗಿದ್ದರೂ ಅದನ್ನು ನಾಗರಿಕ ಸೇವೆ ಅಥವಾ ಹುದ್ದೆ ಎಂದು ಪರಿಗಣಿಸಿಲ್ಲ. ಕನಿಷ್ಠ ವೇತನಕ್ಕಿಂತ ಕಡಿಮೆ ಗೌರವಧನದಲ್ಲಿ ದುಡಿಸಿಕೊಳ್ಳಲಾಗುತ್ತಿದೆ.
1972ರ ಗ್ರಾಚ್ಯುಟಿ ಕಾಯ್ದೆ ಪ್ರಕಾರ ಅವರು ನೌಕರರೆಂದು ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟೀಕರಿಸಿದೆ. ಆದ್ದರಿಂದ 2023ರ ನಂತರ ನಿವೃತ್ತಿ ಹೊಂದುವವರಿಗೆ ಗ್ರಾಚ್ಯುಟಿ ನೀಡುವ ನಿರ್ಧಾರವನ್ನು ಸರ್ಕಾರ ಮಾರ್ಪಡಿಸಿ 1975ರಿಂದ ಸೇವೆಗೆ ಸೇರಿ 2011-12ರಲ್ಲಿ ನಿವೃತ್ತರಾದ ಎಲ್ಲರಿಗೂ ಅನ್ವಯವಾಗುವಂತೆ ಗ್ರಾೃಚ್ಯುಟಿ ಸೌಲಭ್ಯ ಜಾರಿಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಎಐಟಿಸಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್‌ಬಾಬು, ರಾಜ್ಯಮಂಡಳಿ ಸದಸ್ಯ ಟಿ.ಆರ್. ಉಮಾಪತಿ, ಜಿಲ್ಲಾಧ್ಯಕ್ಷ ಬಿ. ಬಸವರಾಜಪ್ಪ, ಫೆಡರೇಷನ್ ಜಿಲ್ಲಾಧ್ಯಕ್ಷೆ ಭಾಗ್ಯಮ್ಮ, ಜಮುನಾ ಬಾಯಿ, ಎಚ್. ಸಾವಿತ್ರಮ್ಮ, ವಿನೋದಮ್ಮ, ರತ್ನಮ್ಮ, ರಾಧಮ್ಮ, ಆರ್. ವೇದಾವತಿ, ಎಚ್. ಗೌರಮ್ಮ, ಲಕ್ಷ್ಮೀದೇವಿ, ಸತ್ಯಕೀರ್ತಿ ಇತರರು ಇದ್ದರು.