ಕೊಳ್ಳೇಗಾಲ: ಚಂದಾಪುರದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಕನ್ನಡ ವಿರೋಧಿ ವರ್ತನೆಯ ಬೆನ್ನಲ್ಲೇ ಕೊಳ್ಳೇಗಾಲದ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣದ) ಪದಾಧಿಕಾರಿಗಳು ವಿವಿಧ ಬ್ಯಾಂಕ್‌ಗಳಿಗೆ ಗುರುವಾರ ಭೇಟಿ ನೀಡಿ ಗ್ರಾಹಕರ ಜತೆ ಕನ್ನಡದಲ್ಲಿಯೇ ವ್ಯವಹರಿಸಬೇಕೆಂದು ಬ್ಯಾಂಕ್‌ಗಳ ಮುಖ್ಯಸ್ಥರಿಗೆ ತಿಳಿಸಿದರು.
ಪಟ್ಟಣದ ಎಸ್‌ಬಿಐ ಬ್ಯಾಂಕ್, ಕೆನರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಹಾಗೂ ಬರೋಡ ಬ್ಯಾಂಕ್‌ಗಳಿಗೆ ಕರವೇ ಪದಾಧಿಕಾರಿಗಳು ಭೇಟಿ ನೀಡಿ ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹಾರ ಮಾಡಬೇಕು. ಕನ್ನಡ ಭಾಷೆ ಕಡ್ಡಾಯವಾಗಬೇಕು ಎಂದು ಬಲವಾಗಿ ಆಗ್ರಹಿಸಿದರು.
ಈ ವೇಳೆ ಕರವೇ ತಾಲೂಕು ಅಧ್ಯಕ್ಷ ಅಯಾಜ್ ಮಾತನಾಡಿ, ಕನ್ನಡ ರಾಜ್ಯದಲ್ಲಿ ಕನ್ನಡ ಭಾಷೆಗೆ ಅಗೌರವ ತೋರುವವರ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಬ್ಯಾಂಕ್‌ಗಳಲ್ಲಿ ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡುವುದು ಮತ್ತು ಎಲ್ಲ ಚಲನ್‌ಗಳು ಕನ್ನಡದಲ್ಲಿಯೇ ಲಭ್ಯವಾಗುವುದು ಅತ್ಯಗತ್ಯ ಎಂದು ಹೇಳಿದರು.
ಕರವೇ(ನಾರಾಯಣಗೌಡ ಬಣ) ಗೌರವಾಧ್ಯಕ್ಷ ಇದ್ರೀಶ್ ಪಾಷ, ನಿಶಾರ್ ಅಹಮದ್, ಉಪಾಧ್ಯಕ್ಷ ಕುಮಾರ್, ಮಹೇಂದ್ರ, ಮೂರ್ತಿ, ಶಾಸ್ತ್ರಿ, ತೋಸಿಫ್, ಸಂಘಟನಾ ಕಾರ್ಯದರ್ಶಿ ಸತ್ಯರಾಜ್, ನವೀನ್, ಸಿದ್ದು, ಇಫ್ರಾಜ್, ಬಸವಣ್ಣ, ಸಮೀರ್, ಮಹಿಳಾ ಘಟಕ ಅಧ್ಯಕ್ಷರಾದ ರಾಜೇಶ್ವರಿ, ಭಾಗ್ಯಲಕ್ಷ್ಮೀ, ಕವಿತಾ ಹಾಗೂ ರೈತ ಮುಖಂಡ ರಾಮಕೃಷ್ಣ ಅವರು ಉಪಸ್ಥಿತರಿದ್ದರು.