ಜಿಲ್ಲೆ

ಗ್ರಾಹಕರಿಗೆ ಹಲವು ರೀತಿಯ ಹಕ್ಕು ಮತ್ತು ರಕ್ಷಣೆಗಳಿವೆ

ಹಾಸನ: ಗ್ರಾಹಕರಿಗೆ ಹಲವು ರೀತಿಯ ಹಕ್ಕು ಮತ್ತು ರಕ್ಷಣೆಗಳಿವೆ. ಅವುಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಕಾರ್ಯಾಧ್ಯಕ್ಷ ವೈ.ಎಸ್. ಸಿದ್ದಯ್ಯ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರು ಸುಶಿಕ್ಷಿತರಾಗಿದ್ದರೂ ಗ್ರಾಹಕ ಹಕ್ಕುಗಳ ತಿಳಿವಳಿಕೆ ಇರುವುದಿಲ್ಲ. ಗ್ರಾಹಕರ ಹಕ್ಕುಗಳ ರಕ್ಷಣೆ ಕಾಯಿದೆ 1986ರ ಡಿಸೆಂಬರ್ 24 ರಿಂದ ಜಾರಿಗೆ ಬಂದಿದೆ. ಅದರ ಸ್ಮರಣಾರ್ಥ ಪ್ರತಿ ವರ್ಷ ಡಿಸೆಂಬರ್ 24 ನ್ನು ರಾಷ್ಟ್ರೀಯ ಗ್ರಾಹಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಗ್ರಾಹಕರ ಹಕ್ಕು ಮತ್ತು ರಕ್ಷಣೆಯ ಬಗ್ಗೆ ಪ್ರತಿಯೊಬ್ಬ ಖರೀದಿದಾರರಿಗೆ ಮಾಹಿತಿ ಇರಬೇಕು ಎಂದರು.


ಗ್ರಾಹಕರ ಹಕ್ಕು ಮತ್ತು ರಕ್ಷಣೆಗೆ ಇರುವ ಕಾನೂನುಗಳು, ವ್ಯಾಜ್ಯಗಳ ಪರಿಹಾರಕ್ಕೆ ಇರುವ ವ್ಯವಸ್ಥೆ ಮತ್ತು ಸಾರ್ವಜನಿಕರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ ಸಿದ್ದಯ್ಯ ವಿವರ ನೀಡಿದರು.


ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೆಶಕ ಡಾ. ಎ.ಬಿ. ಸಂಜಯ್ ಮಾತನಾಡಿ, ಗ್ರಾಹಕನನ್ನು ಮಾರುಕಟ್ಟೆಯ ರಾಜ ಎಂಬ ಮಾತು ಇದೆ. ಆದರೆ ಹಕ್ಕುಗಳ ಅರಿವಿಲ್ಲದ ಗ್ರಾಹಕನಿಂದಾಗಿ ಆ ಮಾತು ಸುಳ್ಳಾಗುತ್ತಿದೆ. ಗ್ರಾಹಕರ ಹಕ್ಕುಗಳು ಮತ್ತು ಜವಾಬ್ದಾರಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜವಾಬ್ದಾರಿ ಮರೆತರೆ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್ ಚಂದ್ರ ಮಾತನಾಡಿ, ಬದಲಾದ ಜೀವನ ಶೈಲಿಯಲ್ಲಿ ಮನುಷ್ಯನ ಅಗತ್ಯ ಹಾಗೂ ಆಸೆಗಳು ಹೆಚ್ಚುತ್ತಾ ಸಾಗಿವೆ. ಕೊಳ್ಳುಬಾಕ ಸಂಸ್ಕೃತಿ ಸೃಷ್ಟಿ ಆಗಿದೆ. ಜಾಹೀರಾತುಗಳ ಮೋಡಿಗೆ ಒಳಗಾಗಿ, ಅಗತ್ಯವಿಲ್ಲದಿದ್ದರೂ ಮುಗಿಬಿದ್ದು ವಸ್ತುಗಳನ್ನು ಖರೀದಿಸಲಾಗುತ್ತಿದೆ. ಆದರೆ ಅಲ್ಲಿ ವಹಿಸಬೇಕಾದ ಎಚ್ಚರಿಕೆ ಮರೆಯುತ್ತಿದ್ದೇವೆ ಎಂದು ವಿಷಾದಿಸಿದರು.


ಗ್ರಾಹಕರು ತಾವು ಖರೀದಿಸುವ ಸರಕು ಹಾಗೂ ಸೇವೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಪರಿಶೀಲಿಸುವ, ಪರೀಕ್ಷಿಸುವ ಮಾನೋಭಾವ ಬೆಳೆಸಿಕೊಳ್ಳಬೇಕು. ಆನ್‌ಲೈನ್ ಖರೀದಿಯಲ್ಲಿ ಹಲವು ರೀತಿಯ ಮೋಸ ನಡೆಯುತ್ತಿದ್ದು, ಒಟಿಪಿ ನೀಡುವಾಗ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.


ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣೇಗೌಡ, ಕಾನೂನು ಮಾಪನ ಇಲಾಖೆ ಸಹಾಯಕ ನಿರ್ದೇಶಕ ಪ್ರಸನ್ನ ಕುಮಾರ್, ಆಹಾರ, ಗ್ರಾಹಕ ವ್ಯವಹಾರಗಳು ಮತ್ತು ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕಿ ವಸಂತ ಕುಮಾರಿ, ಆಹಾರ ಸುರಕ್ಷತಾ ಅಧಿಕಾರಿ ಅಡಬಸವೇಗೌಡ ಮತ್ತು ಅಡುಗೆ ಅನಿಲ ವಿತರಕ ಮಂಜುನಾಥ್ ಮಾತನಾಡಿದರು.
ಗ್ರಾಹಕ ಮಾಹಿತಿ ಕೇಂದ್ರದ ಉಪಾಧ್ಯಕ್ಷ ರಂಗೇಗೌಡ, ಪ್ರಧಾನ ಕಾರ್ಯದರ್ಶಿ ನಾರಾಯಣ್, ಖಜಾಂಚಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು. ಸಿ.ಎಸ್. ಉಷಾ ನಿರೂಪಿಸಿದರು.