ಮೈಸೂರು: ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡುವುದನ್ನು ವ್ಯಾಪಾರಸ್ಥರು ಹಾಗೂ ತಯಾರಕರು ಪಾಲಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಬಿ.ನಾರಾಯಣ್ಣಪ್ಪ ಹೇಳಿದರು.
ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರಿಗೆ ಆಗುತ್ತಿದ್ದ ಅನ್ಯಾಯ ತಡೆಯುವ ಸಲುವಾಗಿ ಗ್ರಾಹಕ ಸಂರಕ್ಷಣಾ ದಿನವನ್ನು 1968ರ ಡಿಸೆಂಬರ್ 24ರಲ್ಲಿ ಜಾರಿಗೆ ತರಲಾಯಿತು. ಗ್ರಾಹಕರ ಹಕ್ಕುಗಳ ರಕ್ಷಣೆಯೇ ಈ ಕಾಯ್ದೆಯ ಉದ್ದೇಶ. ಗ್ರಾಹಕರಿಗೆ ವ್ಯಾಪಾರಿಗಳಿಂದ ಯಾವುದೇ ರೀತಿಯ ಸಮಸ್ಯೆ ಉಂಟಾದಲ್ಲಿ ನೇರವಾಗಿ ಗ್ರಾಹಕ ಇಲಾಖೆಯನ್ನು ಸಂಪರ್ಕಿಸಿ. ತಪ್ಪು ಜಾಹೀರಾತುಗಳನ್ನು ನೀಡಿ ಗ್ರಾಹಕರಿಗೆ ವಂಚನೆ ಮಾಡುವ ವ್ಯಾಪಾರಸ್ಥರಿಗೆ ಗ್ರಾಹಕ ಕಾಯ್ದೆಯ ಮೂಲಕ ದೂರು ದಾಖಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಹಕ ಕಾಯ್ದೆಯ ತಿದ್ದುಪಡಿಯ ಮೂಲಕ ಹಲವಾರು ಉಪಯೋಗ ಪಡೆಯಬಹುದಾಗಿದ್ದು, ಆನ್‌ಲೈನ್ ಮೂಲಕ ಗ್ರಾಹಕರಿಗೆ ಮೋಸ ಮಾಡುವಂತಹ ಸಂಸ್ಥೆಗಳ ವಿರುದ್ಧ ಇಲಾಖೆಗೆ ದೂರುಗಳನ್ನು ಸಲ್ಲಿಸಿ ನ್ಯಾಯ ಪಡೆದುಕೊಳ್ಳಬಹುದು. ಖಾಸಗಿ ವಲಯಗಳಲ್ಲಿ ಸಮಸ್ಯೆ, ನೀರು ಸರಬರಾಜು, ವಿದ್ಯುತ್ ಸರಬರಾಜು ಮತ್ತು ಅನುಚಿತ ವ್ಯಾಪಾರ ಪದ್ಧತಿಗಳಲ್ಲಿ ಸಮಸ್ಯೆ ಉಂಟಾದಲ್ಲಿ ಸಹ ದೂರು ದಾಖಲಿಸಿ ಪರಿಹಾರ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗ್ರಾಹಕ ಹಕ್ಕುಗಳ ಇಲಾಖೆಯು ಗ್ರಾಹಕ ಸೇವೆಗೆಂದು ಕಾರ್ಯ ನಿರ್ವಹಿಸುತ್ತದೆ. ಆರೋಗ್ಯ ವಿಮೆ, ಜೀವ ವಿಮೆ, ಕೆಎಸ್‌ಆರ್‌ಟಿಸಿ, ರೈಲ್ವೆ ಹಾಗೂ ಸರ್ಕಾರಿ ಸಂಬಂಧಿತ ಯಾವುದೇ ವಿಚಾರದಲ್ಲಿ ಗ್ರಾಹಕರಿಗೆ ಸಮಸ್ಯೆ ಉಂಟಾದಲ್ಲಿ ಆಯೋಗಕ್ಕೆ ದೂರು ಸಲ್ಲಿಸಿ ಗ್ರಾಹಕರು ಪರಿಹಾರವನ್ನು ಪಡೆಯಬಹುದು. 2019ರ ಗ್ರಾಹಕ ರಕ್ಷಣಾ ಕಾಯ್ದೆಯ ತಿದ್ದುಪಡಿ ಅನ್ವಯ ವಸ್ತುಗಳ ಉತ್ಪನ್ನ, ಗುಣಮಟ್ಟದ ಅಂಶಗಳು ಮತ್ತು ವಸ್ತುಗಳ ತಯಾರಿಕೆಯಲ್ಲಿ ಬಳಸಿರುವ ಅಂಶಗಳ ಸಂಪೂರ್ಣ ಮಾಹಿತಿಯನ್ನು ಪದಾರ್ಥಗಳ ಮೇಲೆ ನಮೂದಿಸಿರಬೇಕು ಎಂದು ಮಾಹಿತಿ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಮಾತನಾಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಎಂ.ಕೆ.ಲಲಿತ, ಮಾರುತಿ ಎಚ್.ವಡ್ಡರ್, ಆಹಾರ ಇಲಾಖೆಯ ಜಂಟಿ ಕಾರ್ಯದರ್ಶಿ ಕುಮುದಾ ಶರತ್, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ ವಿಶ್ವನಾಥ್ ಪಾಲ್ಗೊಂಡಿದರು.