ಜಿಲ್ಲೆ

ಗ್ರಾಹಕರಿಗೆ ಪರಿಹಾರ ನೀಡದಿದ್ರೆ ಕ್ರಿಮಿನಲ್ ಕೇಸ್


ಚಿತ್ರದುರ್ಗ: ಗ್ರಾಹಕರ ಆಯೋಗದ ಆದೇಶದಂತೆ ಸೇವಾದಾರರು ಗ್ರಾಹಕರಿಗೆ ಪರಿಹಾರ ನೀಡದಿದ್ದರೆ, ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎಚ್.ಎನ್.ಮೀನಾ ಎಚ್ಚರಿಸಿದರು.
ಗ್ರಾಪಂ ಮಟ್ಟದ ಸ್ತ್ರೀ-ಶಕ್ತಿ, ಸ್ವ-ಸಹಾಯ ಸಂಘದ ಸದಸ್ಯರಿಗೆ ಬಳ್ಳೇಕಟ್ಟೆಯ ಕುಂಬಾರ ಗುಂಡಯ್ಯ ಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಾಹಕರ ಸಮಸ್ಯೆ ಮತ್ತು ಹಕ್ಕುಗಳ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಯೋಗ ಆದೇಶ ಪಾಲಿಸಲು ವಿಫಲವಾಗುವವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗುವುದು. ಅಪರಾಧಿಗಳು ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದರು.
ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರು 1986ರಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆ ಜಾರಿಗೊಳಿಸಿದರು. ಗ್ರಾಹಕರು ಪ್ರಕರಣ ದಾಖಲಿಸಿದ 3 ತಿಂಗಳ ಒಳಗಾಗಿ ಆಯೋಗ ಇತ್ಯರ್ಥ ಪಡಿಸಲಿದೆ ಎಂದು ಹೇಳೀದರು.
ತೆಲಸಂಗ ಕುಂಬಾರ ಗುಂಡಯ್ಯ ಮಠದ ಶ್ರೀ ಬಸವಕುಂಬಾರ ಗುಂಡಯ್ಯ ಸ್ವಾಮೀಜಿ, ಚಿತ್ರದುರ್ಗ ಕುಂಬಾರ ಗುಂಡಯ್ಯ ಮಠದ ಶ್ರೀ ಬಸವಮೂರ್ತಿ ಕುಂಬಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಆಯೋಗ ಸದಸ್ಯೆ ಬಿ.ಎಚ್.ಯಶೋದಾ, ಆಹಾರ ನಿರೀಕ್ಷಕಿ ಉಮಾದೇವಿ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ ಅಧ್ಯಕ್ಷೆ ಎಸ್.ಬೈಲಮ್ಮ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಜಿಲ್ಲಾ ಸಂಯೋಜಕ ತಮಟಕಲ್ಲು ಬಿ.ಹನುಮಂತಪ್ಪ, ಕುಂಬಾರ ಗಂಡಯ್ಯ ಮಠದ ಮಾಜಿ ಕಾರ್ಯದರ್ಶಿ ಮೃತ್ಯುಂಜಯ , ಅನಂತ್ ಲಕ್ಷ್ಮೀಸಾಗರ ಮತ್ತಿರರು ಇದ್ದರು.
ಆಹಾರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನಾಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಹಾಗೂ ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.