ಅರಕೇರಾ: ನೈಸರ್ಗಿಕವಾಗಿ ದೊರೆಯುವ ಸೀತಾಫಲಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ತಾಲೂಕಿನ ಗುಡ್ಡ ಹಾಗೂ ಜಮೀನು ಬದಿಯಲ್ಲಿ ನೈಸರ್ಗಿಕವಾಗಿ ಬೆಳೆಯುವ ಸೀತಾಫಲದ ಸಿಹಿ ರುಚಿ ಜನರನ್ನು ಸೆಳೆಯುತ್ತಿದೆ.
ಬೇಸಿಗೆಯಲ್ಲಿ ಎಲೆಗಳು ಸಂಪೂರ್ಣ ಉದುರುವ ಸೀತಾಫಲ ಮುಂಗಾರು ಆರಂಭದಲ್ಲಿ ಮತ್ತೆ ಚಿಗುರೊಡೆಯುತ್ತವೆ. ಮುಂಗಾರಿನಲ್ಲಿ ಉತ್ತಮ ಮಳೆಯಾದರಷ್ಟೇ ಫಸಲು ಚೆನ್ನಾಗಿ ಬರುತ್ತದೆ. ರೈತರ ಆರೈಕೆಯಿಲ್ಲದೆ ಶೂನ್ಯ ಬಂಡವಾಳದಲ್ಲಿ ಫಸಲು ಕೈ ಸೇರುವುದು ಸೀತಾಫಲದ ವಿಶೇಷತೆಯಾಗಿದೆ.
ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಹೇರಳವಾಗಿ ಸಿಗುವ ಸೀತಾಫಲಕ್ಕೆ ಬಲು ಬೇಡಿಕೆಯಿರುತ್ತದೆ. ಇದಕ್ಕೆ ಸೀತಾಫಲ ಸೀಜನ್ ಎಂತಲೂ ಕರೆಯುತ್ತಾರೆ. ಮಾರಾಟಗಾರರು ಬುಟ್ಟಿ, ಚೀಲಗಳಲ್ಲಿ ತುಂಬಿಕೊಂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಸುಮಾರು 100 ಕಾಯಿಗೆ 300 ರೂ., 100 ಹಣ್ಣಿಗೆ 250 ರೂ. ಬೆಲೆ ನಿಗದಿ ಮಾಡಿದ್ದಾರೆ. ಕೆಲವೆಡೆ ಒಂದು ಹಣ್ಣಿಗೆ 10 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತಿದೆ.
ಕೆಲವರು ಗುಡ್ಡಗಳಲ್ಲಿ ತಿರುಗಾಡಿ ಸಂಗ್ರಹಿಸಿದ ಸೀತಾಫಲ ಹಣ್ಣು, ಕಾಯಿ ಮಾರಾಟದಿಂದ ದಿನಕ್ಕೆ ಸಾವಿರಾರು ರೂಪಾಯಿ ಲಾಭ ಪಡೆಯುತ್ತಿದ್ದಾರೆ. ಈ ಸೀಜನ್‌ನಲ್ಲಿ ಕೃಷಿ ಕೂಲಿ ಕೆಲಸಕ್ಕೆ ಹೋಗುವವರು ಕೂಲಿ ಕೆಲಸ ಬಿಟ್ಟು ಸೀತಾಫಲ ಹುಡುಕುವುದಕ್ಕೆ ಅಲೆದಾಡುತ್ತಾರೆ. ಪಟ್ಟಣದಿಂದ ಸಿರವಾರ, ದೇವದುರ್ಗ, ಮಾನ್ವಿ, ರಾಯಚೂರು, ಹಟ್ಟಿ ಸೇರಿದಂತೆ ಇತರೆಡೆ ಕೊಂಡೊಯ್ದು ಸೀತಾಫಲ ಮಾರಾಟ ಮಾಡಲಾಗುತ್ತಿದೆ.