ಜಿಲ್ಲೆ

ಗ್ರಾಹಕರ ಹಕ್ಕುಗಳ ಜಾಗೃತಿ ಹೆಚ್ಚಲಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಗ್ರಾಹಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಸಾಕಷ್ಟು ಕಾನೂನುಗಳಿವೆ. ಅವುಗಳ ಕುರಿತು ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜು ಹೇಳಿದರು.

ವಿವಿ ಸಭಾಂಗಣದಲ್ಲಿ ಭಾರತೀಯ ಮಾನಕ ಸಂಸ್ಥೆ (ಬಿಐಎಸ್)ಯ ಹುಬ್ಬಳ್ಳಿ ಶಾಖೆ ಗುರುವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಗ್ರಾಹಕರು ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.

ವಿವಿ ಡೀನ್ ಡಾ. ರತ್ನ ಭರಮಗೌಡರ್ ಮಾತನಾಡಿ, ಗ್ರಾಹಕರ ಹಕ್ಕುಗಳ ವಿವಿಧ ಅಂಶಗಳು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ಗ್ರಾಹಕರನ್ನು ರಕ್ಷಿಸುವ ಕಾನೂನು ನಿಬಂಧನೆಗಳ ಕುರಿತು ಮಾತನಾಡಿದರು.

ಬಿಐಎಸ್ ಹುಬ್ಬಳ್ಳಿ ಶಾಖೆಯ ಉಪ ನಿರ್ದೇಶಕಿ ಮರ್ಸಿ ರಾಣಿ ಎಸ್. ಮಾತನಾಡಿ, ಉತ್ಪನ್ನದ ಗುಣಮಟ್ಟ ಮತ್ತು ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯೊಂದಿಗೆ ಬಿಐಎಸ್ ಕಾರ್ಯನಿರ್ವಹಿಸುತ್ತದೆ ಎಂದರು.

ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಸಂಸ್ಥೆಯ ಉಪ ನಿರ್ದೇಶಕ ಎಂ. ಪ್ರದೀಪ ಕುಮಾರ್, ಉತ್ಪನ್ನಗಳ ಗುಣಮಟ್ಟ ಹಾಗೂ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಕೇಂದ್ರ ಸರ್ಕಾರದ ಗುಣಮಟ್ಟ ನಿಯಂತ್ರಣ ಆದೇಶಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ವಿವಿಯ ಐಕ್ಯುಎಸಿ ಸಂಯೋಜಕ ಡಾ. ರಾಜೇಂದ್ರ ಹಿಟ್ಟಣಗಿ, ಗ್ರಾಹಕ ಸಂರಕ್ಷಣಾ ಕಾನೂನುಗಳು, ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಹಾಗೂ ಬಿಐಎಸ್ ಕಾಯ್ದೆ 2016ರ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.