ಜಿಲ್ಲೆ

ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ

ಎ.ಎಸ್.ಮಣಿಕಂಠ

ಚಾಮರಾಜನಗರ: ಗ್ರಾಹಕರ ಸೋಗಿನಲ್ಲಿ ಚಿನ್ನ ಖರೀದಿಸಲು ಬಂದು, ಚಿನ್ನದ ಅಂಗಡಿಯಲ್ಲಿ ಒಡವೆಯನ್ನು ಕದ್ದು ಹೋಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ನಗರದ ದೊಡ್ಡಅಂಗಡಿ ಬೀದಿಯಲ್ಲಿರುವ ಶ್ರೀಬಸವೇಶ್ವರ ಜ್ಯೂವೇಲರ್ಸ್ ಅಂಗಡಿಯಲ್ಲಿ ಗುರುವಾರ ಮಧ್ಯಾಹ್ನ ಚಿನ್ನಾಭರಣಗಳನ್ನು ಖರೀದಿಸಲು ಕೆಲವು ಗ್ರಾಹಕರು ಬಂದಿದ್ದು, ಅದೇ ವೇಳೆಯಲ್ಲಿ 30-40 ವರ್ಷ ವಯಸ್ಸಿನ ಮಹಿಳೆಯೊಬ್ಬರು ಬಂದು ತಾಳಿಯ ಗುಂಡುಗಳನ್ನು ಕೇಳಿದ್ದಾರೆ. ಈ ವೇಳೆ ಚಿನ್ನದ ಗುಂಡುಗಳನ್ನು ತೋರಿಸಲು ಮುಂದಾದಾಗ ಮತ್ತೆ ಚಿನ್ನದ ಸರವನ್ನು ತೋರಿಸಲು ಹೇಳಿದ್ದಾಳೆ. ಬಳಿಕ ಅಂಗಡಿಯವರು ಬೇರೆ ಗ್ರಾಹಕರಿಗೆ ಚಿನ್ನವನ್ನು ತೋರಿಸಲು ಮುಂದಾದಾಗ, ಆಕೇ ನನ್ನ ಅಕ್ಕನನ್ನು ಕರೆದುಕೊಂಡು ಬರುತ್ತೇನೆ ಎಂದು ಹೊರಟು ಹೋಗಿದ್ದಾಳೆ.

ಈ ವೇಳೆ ಅಂಗಡಿ ಮಾಲೀಕರಿ ಅನುಮಾನ ಬಂದು ಸಿಸಿ ಟಿವಿಯನ್ನು ಪರಿಶೀಲಿಸಿ ನೋಡಲಾಗಿ 1 ಗ್ರಾಂ ತೂಕದ ಎರಡು ಚಿನ್ನದ ಗುಂಡು ಹಾಗೂ 8 ಗ್ರಾಂ ತೂಕದ ಒಂದು ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ತಿಳಿದುಬಂದಿದೆ. ಒಟ್ಟಾರೆಯಾಗಿ 9 ಗ್ರಾಂ ತೂಕದ 84,000 ರೂ, ಮೌಲ್ಯದ ಚಿನ್ನಾಭರಣವನ್ನು ಕದ್ದುಕೊಂಡು ಹೋಗಿದ್ದಾಳೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.