ಮೈಸೂರು: ಆನ್‌ಲೈನ್ ಮೂಲಕ ಖರೀದಿ ಮಾಡಿದ ಸರಕು ಸಂಬಂಧವೂ ದೂರು ಸಲ್ಲಿಸಬಹುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎ.ಕೆ.ನವೀನ್‌ಕುಮಾರಿ ಹೇಳಿದರು.
ಯಾದವಗಿರಿಯ ವಿವೇಕಾನಂದ ರಸ್ತೆಯಲ್ಲಿರುವ ಮೈಸೂರು ಗ್ರಾಹಕರ ಪರಿಷತ್ ಕಚೇರಿಯಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಹಾಗೂ ಗ್ರಾಹಕರ ಕುಂದುಕೊರತೆ ಸಂಬಂಧ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.
ಆನ್‌ಲೈನ್ ಮೂಲಕ ಖರೀದಿಸುವ ಸಾಮಗ್ರಿಗಳನ್ನು ಪ್ಯಾಕ್‌ನಿಂದ ಹೊರತೆಗೆಯುವಾಗ ವಿಡಿಯೋ ಮಾಡಿಕೊಳ್ಳುವುದು ಒಳ್ಳೆಯದು. ಇದರಿಂದ ಗುಣಮಟ್ಟದ ಸಾಮಗ್ರಿ ಬಂದಿಲ್ಲವೆಂದರೆ ಅಥವಾ ಗ್ರಾಹಕ ಖರೀದಿಸಿದ್ದ ವಸ್ತು ಬದಲು ಬೇರೆ ಬಂದಿದ್ದರೆ, ಖಚಿತ ಸಾಕ್ಷ್ಯ ಹೊಂದಲು ಸಾಧ್ಯವಾಗಲಿದೆ. ಮೊಬೈಲ್ ಮೂಲಕ ವಿಡಿಯೋ ಮಾಡಿಕೊಳ್ಳಬಹುದು ಎಂದು ವಿವರಿಸಿದರು.
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಆನ್‌ಲೈನ್ ಮೂಲಕವೇ ದೂರು ಸಲ್ಲಿಸಬೇಕಿದ್ದು, ಆದರೆ ದೂರು ಸಲ್ಲಿಸಲು ಯಾವುದೇ ನಮೂನೆ ನಿಗದಿಪಡಿಸಿಲ್ಲ. ವಕೀಲರು ಇಲ್ಲದೆಯೂ ಗ್ರಾಹಕರೇ ಸ್ವತಃ ವಕಾಲತ್ತು ವಹಿಸಲೂ ಅವಕಾಶವಿದೆ ಎಂದರು
ಸೇವೆ ಮತ್ತು ಸರಕು ಸಂಬಂಧ 50 ಲಕ್ಷ ರೂ.ವರೆಗೆ ಜಿಲ್ಲಾ ಗ್ರಾಹಕರ ಆಯೋಗದ ವ್ಯಾಪ್ತಿಗೆ ಬರಲಿದೆ. ಸರಕು ಅಥವಾ ಸೇವೆಯಲ್ಲಿ ದೋಷ ಕಂಡು ಬಂದ ದಿನದಿಂದ ಎರಡು ವರ್ಷದೊಳಗೆ ದೂರು ಸಲ್ಲಿಸಲು ಅವಕಾಶವಿದೆ. ಆಸ್ಪತ್ರೆ, ವಿಮೆ ಸೇರಿದಂತೆ ಸೇವೆಗಳಿಗೆ ಸಂಬಂಧವೂ ದೂರು ನೀಡಬಹುದು ಎಂದರು
2022ರಲ್ಲಿ ಆಯೋಗದ ಅಧ್ಯಕ್ಷೆಯಾಗಿ ನಾನು ಅಧಿಕಾರ ವಹಿಸಿಕೊಂಡೆ. ಆಗ ಆಯೋಗದಲ್ಲಿ 840 ಪ್ರಕರಣಗಳು ವಿಲೇವಾರಿ ಆಗದೆ ಬಾಕಿ ಇದ್ದವು. ಈಗ 339 ಪ್ರಕರಣಗಳಿಗೆ ಇಳಿಕೆಯಾಗಿದ್ದು, ತ್ವರಿತಗತಿಯಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಪ್ರಯತ್ನ ಮಾಡಿದ್ದೇವೆ ಎಂದು ಸಭಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಎಂಜಿಪಿ ಮಾಜಿ ಕಾರ್ಯಾಧ್ಯಕ್ಷ ರಾಘವೇಂದ್ರ ಮಾತನಾಡಿ, ಗ್ರಾಹಕರ ಅರಿವು ಕಾರ್ಯಕ್ರಮಗಳು ಸಮರ್ಪಕವಾಗಿ ಆಗುತ್ತಿಲ್ಲ. ಗ್ರಾಹಕರು ತಮಗೆ ಆದ ಅನ್ಯಾಯಕ್ಕೆ ನ್ಯಾಯ ಪಡೆಯುವ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ. ಗ್ರಾಹಕರಿಗೆ ನ್ಯಾಯ ದೊರಕಿಸಲು ಆಯೋಗದ ವ್ಯವಸ್ಥೆ ಇದೆ. ಈ ಎಲ್ಲದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಹೀಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಆಯೋಜಿಸುವ ಬಗ್ಗೆ ಆಯೋಗದ ಕಡೆಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನವೀನ್‌ಕುಮಾರಿ, ಗ್ರಾಹಕರ ಆಯೋಗದ ತೀರ್ಪುಗಳಿಗೆ ಹೆಚ್ಚು ಪ್ರಚಾರ ನೀಡುವ ಅಗತ್ಯವಿದೆ. ಇದರಿಂದ ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಲಿದೆ. ಯಾವುದೇ ಉತ್ಪನ್ನ ಸಂಬಂಧ ಪೂರೈಕೆದಾರರಿಗೆ ದಂಡ ವಿಧಿಸಿರುವ ಸುದ್ದಿಗಳು ಪ್ರಕಟಗೊಂಡಾಗ ನ್ಯಾಯ ಪಡೆಯಬಹುದು ಎಂಬ ಅರಿವು ಗ್ರಾಹಕರಲ್ಲಿ ಮೂಡಲಿದೆ ಎಂದರು.
ಒಂದು ಸಾಬೂನು ಖರೀದಿ ಮಾಡಿದರೆ ಅದಕ್ಕೆ ಎಂಆರ್‌ಪಿಗಿಂತ ಒಂದು ರೂಪಾಯಿ ಹೆಚ್ಚು ಪಡೆದರೆ, ಇದರ ವಿರುದ್ಧವೂ ದೂರು ದಾಖಲಿಸಬಹುದು. ಆ ಮೂಲಕ ಗ್ರಾಹಕರಿಂದ ಹೆಚ್ಚು ವಸೂಲಿ ಮಾಡಿದ ವ್ಯಾಪಾರಸ್ಥರಿಗೆ ದಂಡ ವಿಧಿಸಲು ಅವಕಾಶವಾಗಲಿದೆ ಎಂದು ತಿಳಿಸಿದರು.
ಎಂಜಿಪಿ ಸದಸ್ಯ ಡಿ.ವಿ.ದಯಾನಂದ್ ಸಾಗರ್ ಮಾತನಾಡಿ, ಜೆಎನ್ ನರ್ಮ್ ಯೋಜನೆಯಡಿ ಗೋಕುಲಂನಲ್ಲಿ ವಾರ್ಡ್ ಅಭಿವೃದ್ಧಿಗೆ 2009ರಲ್ಲಿ ಸಾರ್ವಜನಿಕರ ಸಹಭಾಗಿತ್ವದಡಿ ಹಣ ಸಂಗ್ರಹಿಸಲಾಯಿತು. ಇದರೊಂದಿಗೆ ಹೆಚ್ಚುವರಿ ಹಣ ಸರ್ಕಾರದಿಂದ ಮಂಜೂರು ಆಗಲಿದೆ ಎಂದು ಹೇಳಲಾಗಿತ್ತು. ಆದರೆ ಹೆಚ್ಚುವರಿ ಹಣ ಸರ್ಕಾರದಿಂದ ಮಂಜೂರು ಆದಂತೆ ಇಲ್ಲ ಎಂದರು.
ವಲಯ ಕಚೇರಿ 4ರ ವಲಯ ಆಯುಕ್ತರ ಬ್ಯಾಂಕ್ ಖಾತೆಯಲ್ಲಿ ನಮ್ಮ ವಾರ್ಡ್ ನಾಗರಿಕರಿಂದ ಅಂದು ಸಂಗ್ರಹಿಸಿದ ಹಣ 1,36,114 ರೂ. ಇದೆ. ಇದನ್ನು ಹಿಂಪಡೆದು ವಾರ್ಡ್ ಅಭಿವೃದ್ಧಿಗೆ ವಿನಿಯೋಗಿಸಬೇಕಿದೆ. ವಾರ್ಡ್‌ನಿಂದ ಅರ್ಜಿ ಸಲ್ಲಿಸಿ, ನಾಗರಿಕರಿಂದ ಸಂಗ್ರಹಿಸಿದ ಹಣ ವಾಪಸ್ ನೀಡುವಂತೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಗ್ರಾಹಕರ ವ್ಯಾಜ್ಯಗಳ ಆಯೋಗದಿಂದ ಪರಿಹಾರ ದೊರೆಯಬಹುದೇ ಎಂದು ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನವೀನ್‌ಕುಮಾರಿ, ಸಂಬಂಧಿಸಿದ ದಾಖಲೆಗಳೊಂದಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಬಹುದು ಎಂದರು.
ಎಂಜಿಪಿ ಸಂಸ್ಥಾಪಕ ಅಧ್ಯಕ್ಷ ಭಾಮಿ ವಿ.ಶೆಣೈ, ಕಾರ್ಯಾಧ್ಯಕ್ಷ ಶೋಭನ, ಸದಸ್ಯರಾದ ನಟರಾಜ್, ಭಾನು ಪ್ರಶಾಂತ್, ಪ್ರಭಾ ನಂದೀಶ್, ಎಎಪಿ ಮುಖಂಡರಾದ ಮಾಲವಿಕ ಗುಬ್ಬಿವಾಣಿ ಇತರರಿದ್ದರು.