ಜಿಲ್ಲೆ

ಗ್ರಾಹಕರ ನಿರೀಕ್ಷೆಯಲ್ಲಿ ವ್ಯಾಪಾರಿಗಳು, ಗಣೇಶ ಮೂರ್ತಿ ಕೊಳ್ಳುವವರ ಸಂಖ್ಯೆ ಕ್ಷೀಣ, 3 ಅಡಿಗಳಿಗಷ್ಟೇ ಮೂರ್ತಿ ಸೀಮಿತ

ಬೆಂಗಳೂರು ಗ್ರಾಮಾಂತರ: ಗೌರಿ-ಗಣೇಶ ಹಬ್ಬ ಸಮೀಪಿಸುತ್ತಿದ್ದರೂ ಗಣೇಶ ಮೂರ್ತಿ ಖರೀದಿ ಚುರುಕುಗೊಂಡಿಲ್ಲ, ಗ್ರಾಹಕರ ಆಗಮನಕ್ಕಾಗಿ ವ್ಯಾಪಾರಿಗಳು ಎದುರು ನೋಡುವಂತಾಗಿದೆ.

ಕರೊನಾ ಮೂರನೇ ಅಲೆ ಆತಂಕದ ಹಿನ್ನೆಲೆಯಲ್ಲಿ ಈ ಬಾರಿಯೂ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ, ಗಣಪ ಮೂರ್ತಿಗಳನ್ನು ಸಾಲಾಗಿ ಜೋಡಿಸಿಕೊಂಡು ಗ್ರಾಹಕರನ್ನು ಎದುರು ನೋಡುತ್ತಿದ್ದಾರೆ. ಹಬ್ಬಕ್ಕೆ ತಿಂಗಳಿರುವಾಗಲೇ ಶುರುವಿಟ್ಟುಕೊಳ್ಳುತ್ತಿದ್ದ ಮೂರ್ತಿಗಳ ಖರೀದಿ ಭರಾಟೆ ಈ ಬಾರಿ ಆರಂಭವೇ ಆಗಿಲ್ಲ.

ಗೊಂದಲದಲ್ಲಿ ಭಕ್ತರು: ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲ, ಹಿಂದುಪರ ಸಂಘಟನೆಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅನುಮತಿ ನೀಡುವಂತೆ ಸಾಕಷ್ಟು ಒತ್ತಡ ಹಾಕುತ್ತಿವೆೆ. ಏತನ್ಮಧ್ಯೆ ನೆರೆ ಕೇರಳದಲ್ಲಿ ಕರೊನಾ ಸ್ಫೋಟಗೊಂಡಿದ್ದು, ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಇದರಿಂದಾಗಿ ಅನುಮತಿ ಸಿಗುವುದೋ ಇಲ್ಲವೊ ಎಂಬ ಗೊಂದಲವೂ ಇದೆ. ಈ ಕಾರಣದಿಂದ ಗಣೇಶ ಮೂರ್ತಿ ತಯಾರಕರು ದೊಡ್ಡ ಗಾತ್ರದ ಮೂರ್ತಿಗಳನ್ನು ತಯಾರಿಸಲು ಮುಂದಾಗಿಲ್ಲ. ಪ್ರತಿ ವರ್ಷ ತಿಂಗಳಿಗೆ ಮೊದಲೇ ಮುಂಗಡವಾಗಿ ದೊಡ್ಡ ಗಾತ್ರದ ಗಣೇಶಗಳಿಗೆ ಮುಗಿಬೀಳುತ್ತಿದ್ದ ಗ್ರಾಹಕರ ಸುಳಿವಿಲ್ಲದಂತಾಗಿದೆ.

ಪುಟ್ಟ ಗಣಪಗಳೇ ಹೆಚ್ಚು: ಕೆಲ ದಿನಗಳಿಂದ ಜಿಲ್ಲೆಯ ಕೇಂದ್ರ ಸ್ಥಾನಗಳಲ್ಲಿ ಅಲ್ಲಲ್ಲಿ ಗಣೇಶ ಮೂರ್ತಿಗಳ ವ್ಯಾಪಾರ ಅರಂಭವಾಗಿದೆ. ಹೆಚ್ಚೆಂದರೆ 3 ಅಡಿ ಗಣೇಶ ಮೂರ್ತಿಗಳಿಗಷ್ಟೇ ಸೀಮಿತವಾಗಿದೆ. ಸಣ್ಣ ಗಣಪ ಮೂರ್ತಿಗಳ ಸಾಲು ಕಂಡುಬರುತ್ತಿದೆ. ಸಾರ್ವಜನಿಕವಾಗಿ ಪ್ರತಿಷ್ಠಾಪನೆಯಾಗದಿದ್ದರೂ ಮನೆಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಭಕ್ತರು ಬಂದೇ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಗ್ರಾಹಕರನ್ನು ಎದುರು ನೋಡುತ್ತಿದ್ದಾರೆ.

ಪರಿಸರಸ್ನೇಹಿ ಗಣಪನಿಗೆ ಬೇಡಿಕೆ: ನಗರ ಪಟ್ಟಣ ಪ್ರದೇಶಗಳಲ್ಲಿ ಪರಿಸರ ಜಾಗೃತಿ ಹೆಚ್ಚಾಗಿರುವ ಕಾರಣ ಪರಿಸರಸ್ನೇಹಿ ವಿಗ್ರಹಗಳಿಗೆ ಬೇಡಿಕೆ ಕುದುರಲಿದೆ. ಪರಿಸರಕ್ಕೆ ಮಾರಕವಾಗುವ ಪಿಒಪಿ (ಪ್ಲಾಸ್ಟರ್ ಆ್ ಪ್ಯಾರೀಸ್) ಗಣಪ ಮೂರ್ತಿಗಳು ಕಣ್ಮರೆಯಾಗಿವೆ. ಎಲ್ಲ ಕಡೆಗಳಲ್ಲೂ ಪರಿಸರಸ್ನೇಹಿ (ಬಣ್ಣವಿಲ್ಲದ ಮಣ್ಣಿನ ಮೂರ್ತಿ) ಗಣೇಶ ಮೂರ್ತಿಗಳೇ ಕಂಡುಬರುತ್ತಿವೆ.

ಬೀಡುಬಿಟ್ಟಿರುವ ಕುಟುಂಬಗಳು: ಗಣೇಶನ ಮೂರ್ತಿ ಮಾರಾಟಕ್ಕೆಂದು ದೂರದೂರದ ಜಿಲ್ಲೆಗಳಿಂದ ವಲಸೆ ಬಂದಿರುವ ಕುಟುಂಬಗಳು ಜಿಲ್ಲೆಯ ಕೇಂದ್ರ ಸ್ಥಾನಗಳಲ್ಲಿ ಬೀಡುಬಿಟ್ಟಿವೆ. ಮುಂಗಡ ಕಾಯ್ದಿರಿಸುವುದಿರಲಿ ವಿಚಾರಿಸಲೂ ಯಾರೂ ಬರುತ್ತಿಲ್ಲ. 25 ವರ್ಷಗಳಿಂದ ಮೂರ್ತಿ ತಯಾರಿಸುವ ವೃತ್ತಿ ಮಾಡುತ್ತಿದ್ದೇನೆ. ಇಂತಹ ಸ್ಥಿತಿ ಎದುರಾಗಿರಲಿಲ್ಲ ಎಂದು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ವ್ಯಾಪಾರಿ ರಾಮಯ್ಯ ವಿಜಯವಾಣಿಯೊಂದಿಗೆ ಅಳಲು ತೋಡಿಕೊಂಡರು.

ವ್ಯಾಪಾರಿಗಳಿಗೆ ಪರದಾಟ: ದೂರದ ಪ್ರದೇಶಗಳಿಂದ ತಂದಿರುವ ಮೂರ್ತಿಗಳು ಬಿಕರಿಯಾಗದಿದ್ದರೆ ಅವುಗಳನ್ನು ಏನು ಮಾಡುವುದು ಎಂಬುದು ವ್ಯಾಪಾರಿಗಳ ಚಿಂತೆಯಾಗಿದೆ. ಈ ಹಿಂದೆ ಉಳಿದ ಕೆಲವು ಮೂರ್ತಿಗಳನ್ನು ಮುಂದಿನ ವರ್ಷದವರೆಗೆ ಜೋಪಾನ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಹೆಚ್ಚಿನ ಮೂರ್ತಿಗಳನ್ನು ಇಟ್ಟುಕೊಳ್ಳುವುದಾದರೂ ಎಲ್ಲಿ ಎಂಬ ಚಿಂತೆ ಆವರಿಸಿದೆ.