ಮಾಂಜರಿ: ವ್ಯವಹಾರಿಕ ಸಂಸ್ಥೆಗಳು ಮಾರುಕಟ್ಟೆಯನ್ನು ಅವಲಂಬಿಸಿವೆ. ಇಲ್ಲಿ ಗ್ರಾಹಕರ ಪಾತ್ರ ಮಹತ್ವದ್ದಾಗಿದ್ದು, ಗ್ರಾಹಕನನ್ನು ಆಧುನಿಕ ಮಾರುಕಟ್ಟೆಯ ರಾಜ ಎಂದು ಕರೆಯಲಾಗುತ್ತಿದೆ ಎಂದು ಖಾನಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ವಿದ್ಯಾ ಜೀರಗೆ ಹೇಳಿದರು.
ಸಮೀಪದ ಶಿರಗುಪ್ಪಿಯ ಕೆಎಲ್ಇ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗ ಹಾಗೂ ಐ.ಕ್ಯೂ.ಎ.ಸಿ. ಸಹಯೋಗದಲ್ಲಿ "ಗ್ರಾಹಕರ ವರ್ತನೆ' ವಿಷಯದ ಕುರಿತು ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ದೀರ್ಘಾವಧಿವರೆಗೆ ವ್ಯವಹಾರ ನಡೆಸಿಕೊಂಡು ಹೋಗಲು ಗ್ರಾಹಕರ ಅವಶ್ಯವಿದೆ. ಗ್ರಾಹಕರನ್ನು ಸೆಳೆಯಲು ಮಾರಾಟಗಾರರು ಬಗೆಬಗೆಯ ತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ಅವರಿಗೆ ಬೇಕಾದ ಸರಕು&ಸೇವೆಗಳ ಉತ್ಪಾದನೆ, ಯೋಗ್ಯ ಬೆಲೆ, ಗುಣಮಟ್ಟ, ನಿಗದಿತ ಸಮಯದಲ್ಲಿ ಪೂರೈಕೆ ಮಾಡುವ ಜತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಪ್ರೊ.ಎಸ್.ಬಿ.ಪಾಟೀಲ ಮಾತನಾಡಿದರು. ವಾಣಿಜ್ಯ ವಿಭಾಗದ ಸಂಯೋಜಕ ಪ್ರೊ.ಎಲ್.ಎಸ್.ವಂಟಮೂರೆ, ಪ್ರೊ.ವಿಠ್ಠಲ ಸೋನಪ್ಪನವರ, ಐಕ್ಯೂಎಸಿ ಅಧ್ಯೆ ಪ್ರೊ.ರಾಧಿಕಾ ಯಾದವ, ಪ್ರಾಧ್ಯಾಪಕ ಡಾ.ಜಯವೀರ ಎ.ಕೆ., ಪಲ್ಲವಿ ಕಟ್ಟಿ ಇತರರಿದ್ದರು.