ಮೈಸೂರು: ಗ್ರಾಮಗಳ ಅಭಿವೃದ್ಧಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಮಾತ್ರ ಸಾಧ್ಯ. ಪಿಡಿಒಗಳು ಹೇಳಿದಂತೆ ಕೇಳಬೇಡಿ. ಗ್ರಾಮಗಳ ಅಭಿವೃದ್ಧಿಗೆ ಶಕ್ತಿ ಮೀರಿ ದುಡಿಯಿರಿ ಎಂದು ವಿಧಾನ ಪರಿಷತ್ ಸದಸ್ಯ ಜಿ.ರಘು ಆಚಾರ್ ನೂತನ ಗ್ರಾಪಂ ಸದಸ್ಯರಿಗೆ ಸಲಹೆ ನೀಡಿದರು.
ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ಸಮಾಜದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಂಚಾಯಿತಿ ಸದಸ್ಯರು ತಮ್ಮ ಗ್ರಾಮದ ಶಾಲೆಗಳಿಗೆ ದಿಢೀರ್ ಭೇಟಿ ನೀಡಬೇಕು. ಅಲ್ಲಿನ ಸಮಸ್ಯೆಗಳ ಬಗ್ಗೆ ಬೆಳಕು ಹರಿಸಬೇಕು. ಅಲ್ಲದೆ, ಉತ್ತಮ ಪಾಠ-ಪ್ರವಚನಗಳಿಗೂ ನೆರವಾಗುವ ಜತೆಗೆ ಉತ್ತಮ ಲಿತಾಂಶ ಬರುವಂತೆ ನೋಡಿಕೊಳ್ಳಿ ಎಂದರು.
ನಿಮ್ಮ ಗ್ರಾಮದ ಶಾಲೆಗೆ ವಾರದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ಅಲ್ಲಿನ ಶೌಚಗೃಹ, ನೀರು, ಶಿಕ್ಷಕರ ಪಾಠ ಪ್ರವಚನಗಳ ಬಗ್ಗೆ ಪರಿಶೀಲಿಸಿ. ಸರ್ಕಾರಿ ಅನುದಾನ ಸಮರ್ಪಕವಾಗಿ ಬಳಕೆಯಾದರೆ ಗ್ರಾಮಗಳ ಅಭಿವೃದ್ಧಿ ನಿಶ್ಚಿತ. ಜತೆಗೆ ಗ್ರಾಪಂ ಸದಸ್ಯರ ಬಗ್ಗೆಯೂ ಜನರಿಗೆ ವಿಶ್ವಾಸ ಮೂಡುತ್ತದೆ ಎಂದು ಹೇಳಿದರು.
ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಗೆಜ್ಜಗಾರಗುಪ್ಪೆ ಶ್ರೀ ಮುರಾರಿಸ್ವಾಮಿ ಕ್ಷೇತ್ರದ ಪೀಠಾಧಿಪತಿ ಡಾ.ಕುಮಾರಸ್ವಾಮಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬು ಪತ್ತಾರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಮತ್ತಿತರರು ಇದ್ದರು.