ಚಿತ್ರದುರ್ಗ: ‘ನಲ್-ಜಲ್ ಮಿತ್ರ’ ಕಾರ್ಯಕ್ರಮದ ಮೂಲಕ ಮಹಿಳೆಯರಿಗೆ ಕುಡಿಯುವ ನೀರು ಸರಬರಾಜು ನಿರ್ವಹಣೆ ತರಬೇತಿ ನೀಡಲಾಗುತ್ತಿದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಎಸ್. ಗಾಯತ್ರಿ ಹೇಳಿದರು.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ, ರಾಜ್ಯ ಜೀವನೋಪಾಯ ಅಭಿಯಾನ, ಎನ್‌ಆರ್‌ಎಲ್‌ಎಂ, ಜಿಟಿಟಿಸಿ, ಐಟಿಐ ಹಾಗೂ ಜಿಪಂ ಸಹಯೋಗದಲ್ಲಿ ಸೋಮವಾರ ಸರ್ಕಾರಿ ಕೈಗಾರಿಕಾ ತರಬೇತಿ(ಮಹಿಳಾ)ಸಂಸ್ಥೆಯಲ್ಲಿ ನೀರು ವಿತರಣಾ ನಿರ್ವಾಹಕರ ಜಾಬ್‌ರೋಲ್ ಕುರಿತು ಮಹಿಳಾ ಅಭ್ಯರ್ಥಿಗಳಿಗೆ ಏರ್ಪಡಿಸಿದ್ದ ಕೌಶಲ ತರಬೇತಿ ಉದ್ಘಾಟಿಸಿ ಮಾತನಾಡಿದರು.
ಜಲಜೀನವ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಮನೆಗೂ ನಳ ಸಂಪರ್ಕದ ಮೂಲಕ ಶುದ್ಧ ಕುಡಿಯುವ ನೀ ರು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಪೂರ್ಣವಾಗುವ ಹಂತದಲ್ಲಿದೆ. ಈ ಹಿನ್ನೆಲೆಯಲ್ಲಿ ನೀರು ವಿತರಣೆ ನಿರ್ವಾಹಕರಿಗೆ ಕೌಶಲ ತರಬೇತಿ ನೀಡಲಾಗುತ್ತಿದೆ. ಜಲಜೀವನ್ ಮಿಷನ್ ನೆಟ್‌ವರ್ಕ್ ವ್ಯವಸ್ಥೆ, ಪೈಪ್‌ಲೈನ್ ದುರಸ್ತಿಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ವೇಮಣ್ಣ ಮಾತನಾಡಿ, ಅಭ್ಯರ್ಥಿಗಳಿಗೆ 17 ದಿನಗಳ ಕಾಲ ತರಬೇತಿ ನೀಡಲಾಗುವುದು. ನಂತರ 21 ದಿನಗಳ ಕಾಲ ಗ್ರಾಪಂ ಮಟ್ಟದಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಈಗಿನ ದಿನಮಾನಗಳಲ್ಲಿ ವೃತ್ತಿ ಕೌಶಲವಿಲ್ಲದೆ ನೌಕರಿ ಪಡೆಯಲು ಸಾಧ್ಯವಿಲ್ಲ ಎಂದರು.
ಜಿಟಿಟಿಸಿ ಪ್ರಾಂಶುಪಾಲ ಸುಹಾಸ್, ಚಳ್ಳಕೆರೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಿರಿಯ ತರಬೇತಿ ಅಧಿಕಾರಿ ಕೆ.ಟಿ. ಸತ್ಯಣ್ಣ ಮಾತನಾಡಿದರು. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಬಿ. ಸುರೇಶ್, ಜಲಜೀವನ್ ಮಿಷನ್ ಕಾರ್ಯಕ್ರಮ ವ್ಯವಸ್ಥಾಪಕರಾದ ಯೋಗೇಶ್, ಮಂಜುನಾಥ್‌ನಾಡರ್ ಇತರರು ಇದ್ದರು.