ಬೇಲೂರು ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪಠ್ಯೇತರ ಚಟುವಟಿಕಗಳ ಸಮಾರೋಪ ಸಮಾರಂಭವನ್ನು ಡಾ.ಹಂಪನಹಳ್ಳಿ ತಿಮ್ಮೇಗೌಡ ಉದ್ಘಾಟಿಸಿದರು. ಪುಟ್ಟರಾಜು, ಕೇಶವಕಿರಣ್, ಲೋಕೇಶ್, ಬಾಬು ಪ್ರಸಾದ್ ಇತರರು ಇದ್ದರು. 
ಜಿಲ್ಲೆ

ಗ್ರಾಮೀಣರಿಗೂ ಬೇಡವಾಗಿದೆ ಜಾನಪದ

ಬೇಲೂರು: ಸಾಹಿತ್ಯ ಕ್ಷೇತ್ರಕ್ಕೆ ಅಡಿಪಾಯವಾದ ಜನಪದಕ್ಕೆ ಆಧುನಿಕ ಜಗತ್ತಿನಲ್ಲಿ ಮಾರಕ ಪರಿಣಾಮ ಉಂಟಾಗುತ್ತಿದ್ದು, ಜನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗಬೇಕಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಹಾಸನ ಜಿಲ್ಲಾಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು.

ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಠ್ಯೇತರ ಚಟುವಟಿಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದ ಅಮೂಲ್ಯ ಆಸ್ತಿ ಯುವ ಜನಾಂಗ. ಆದರೆ ಇಂದು ಯುವ ಸಮುದಾಯ ದುಶ್ಚಟಗಳ ದಾಸರಾಗುವ ಮೂಲಕ ತಮ್ಮ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಇಲ್ಲ-ಸಲ್ಲದ ವಿಚಾರಗಳ ಕಡೆ ಗಮನ ನೀಡುತ್ತಿದ್ದಾರೆ. ಈ ಕಾರಣದಿಂದಲೇ ಯುವಕರಿಗೆ ಉತ್ತಮ ಮಾರ್ಗದರ್ಶನ ನೀಡಬೇಕಿದೆ. ಮತ್ತು ಶಾಲಾ-ಕಾಲೇಜುಗಳ ಪಠ್ಯಗಳಲ್ಲಿ ಯುವ ಜನಾಂಗಕ್ಕೆ ಅನುಕೂಲವಾಗುವಂತಹ ಪಠ್ಯಗಳನ್ನು ಅನುಷ್ಠಾನಗೊಳಿಸಬೇಕಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ಜನ್ಮ ತಾಳಿದ ಜಾನಪದ ಗ್ರಾಮೀಣರಿಗೆ ಬೇಡವಾಗಿದೆ. ಜನಪದ ಕಲೆ ಕೇವಲ ಮನರಂಜನೆಯಲ್ಲ, ಅದು ಬದುಕಿನ ತಳಪಾಯ ಮತ್ತು ನಮ್ಮ ಸಂಸ್ಕೃತಿಯಾಗಿದೆ. ಜನಪದ ಸಂಸ್ಕೃತಿಯಲ್ಲಿ ಯಾವುದೇ ಜಾತಿ, ಧರ್ಮ ವರ್ಗ ಭೇದವಿಲ್ಲದ ಹಿನ್ನೆಲೆಯಲ್ಲಿ ಇಂತಹ ಕಲಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗಬೇಕಿದೆ ಎಂದರು.

ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪುಟ್ಟರಾಜು, ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಧೀಕ್ಷಕ ಕೇಶವಕಿರಣ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಲೋಕೇಶ್, ಕ್ರೀಡಾ ಸಂಚಾಲಕ ಬಾಬು ಪ್ರಸಾದ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಜ್ಯೋತಿ, ಎನ್‌ಎಸ್‌ಎಸ್ ಸಂಚಾಲಕ ಮೋಹನ್ ಕುಮಾರ್, ಉಪನ್ಯಾಸಕ ವೀರಭದ್ರಪ್ಪ ಹಾಜರಿದ್ದರು.