ಮೈಸೂರು: ವಿಶ್ವವಿದ್ಯಾಲಯಕ್ಕೆ ಪ್ರಸಾರಾಂಗವೂ ಮುಖ್ಯ ಎನ್ನುವುದನ್ನು ಮನಗಂಡಿದ್ದ ಕುವೆಂಪು ಅವರು ಪುಸ್ತಕ ಪ್ರಕಾಶನಕ್ಕೆ ಪ್ರಸಾರಾಂಗ ಸ್ಥಾಪಿಸಿದರು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಚಿದಾನಂದಗೌಡ ಹೇಳಿದರು.
ಮಾನಸಗಂಗೋತ್ರಿಯ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಂಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜ್ಞಾನ ಕೇವಲ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮತವಾಗಬಾರದು. ವಿಶ್ವವಿದ್ಯಾಲಯಕ್ಕೆ ಆಡಳಿತಾಂಗ, ಬೋಧನಾಂಗ, ಸಂಶೋಧನಾಂಗದ ಜತೆಗೆ ಗ್ರಾಮೀಣ ಜನರಿಗೂ ಪುಸ್ತಕಗಳು ದೊರೆಯಬೇಕಾದರೆ ಪ್ರಸಾರಾಂಗ ಮುಖ್ಯ ಎಂದಿದ್ದರು. ಜ್ಞಾನ ಕೇವಲ ವಿಶ್ವವಿದ್ಯಾಲಯಕ್ಕೆ ಮಾತ್ರ ಸೀಮತವಾಗಬಾರದು. ಸಾಮಾನ್ಯ ಜನರಿಗೂ ಜ್ಞಾನ ತಲುಪಿಸಲು ಪ್ರಸಾರಾಂಗವನ್ನು ಆರಂಭಿಸಿದರು ಎಂದರು.
ಪ್ರಸಾರಾಂಗ ಮೊದಲು ವಿಶ್ವವಿದ್ಯಾಲಯದ ಭಾಗವಾಗಿರಲಿಲ್ಲ. ಒಮ್ಮೆ ದೇಶದ ಕುಲಪತಿಗಳ ಸಮ್ಮೆಳನದಲ್ಲಿ ಕುವೆಂಪು ಅವರೇ ಪ್ರಥಮವಾಗಿ ಪ್ರಸಾರಾಂಗದ ವಿಷಯ ಮಂಡಿಸಿದ್ದರು ಎಂದು ನೆನಪು ಮಾಡಿಕೊಂಡರು. ಆ ಭಾಗವಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಸಾರಾಂಗವನ್ನು ಸ್ಥಾಪಿಸಲಾಗಿದ್ದು, ಪ್ರಸರಾಂಗದ ಜ್ಞಾನ ಸಂಪೂರ್ಣವಾಗಿ ತೆರೆದಿಡಬೇಕು. ಅದು ಕೇವಲ ವಿಶ್ವವಿದ್ಯಾಲಯದೊಳಗೆ ಮಾತ್ರ ಸಂಚಾರವಾಗಬಾರದು. ಈ ಜ್ಞಾನವನ್ನು ಜನತೆಗೆ ಹಂಚಬೇಕು ಎಂದಿದ್ದರು ಎಂದರು.
ಹಿರಿಯ ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್ ಮಾತನಾಡಿ, ಕುವೆಂಪು ಅವರು ರಾಷ್ಟ್ರಕವಿ ಮಾತ್ರವಲ್ಲ. ಅವರು ವಿಶ್ವಕವಿ. ಕನ್ನಡವನ್ನು ವಿಶ್ವ ಸಾಹಿತ್ಯದ ವೇದಿಕೆಯವರೆಗೂ ತೆಗೆದುಕೊಂಡುಹೋದವರು ಎಂದು ಹೇಳಿದರು.
ಪತ್ನಿ ಹೇಮಾವತಿ ತೀರಿಕೊಂಡಾಗ ಕುವೆಂಪು ಅವರು ಹೇಮಾವತಿ ಎಲ್ಲೂ ಹೋಗಿಲ್ಲ ಅವರು ಇಲ್ಲೇ ಇದ್ದಾರೆ ಎಂದು ಒಮ್ಮೆ ನನಗೆ ಹೇಳಿದ್ದರು. ಹಾಗೆಯೇ ಕುವೆಂಪು ಅವರು ಸಹ ಎಲ್ಲೂ ಹೋಗಿಲ್ಲ ಇಲ್ಲೆ ಇದ್ದಾರೆ. ವಿಶೇಷವಾಗಿ ಈ ಕುವೆಂಪು ಸಭಾಂಗಣದಲ್ಲಿ ಇರುತ್ತಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಸಾರಂಗದ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ಈ ಶತಮಾನದ ಶ್ರೇಷ್ಠಕವಿ ಕುವೆಂಪು. ಅವರಿಗೆ ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ಅದ್ವೀತಿಯವಾದ ಸ್ಥಾನವಿದೆ. ಕರ್ನಾಟಕದಲ್ಲಿ ಮಹಾಕವಿಯೊಬ್ಬರು ಪ್ರಪ್ರಥಮ ಬಾರಿಗೆ ಕುಪತಿಯಾದಂತಹ ಹೆಗ್ಗಳಿಕೆ ಕುವೆಂಪು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಒಂದು ಶತಮಾನದವರೆಗೆ ಕನ್ನಡ ಸಾಹಿತ್ಯ ಪರಂಪರೆಯನ್ನು ಅನ್ಯನವಾಗಿ ಕಟ್ಟಿ ಬೆಳೆಸಿದ ಹಾಗೂ ಬೆಳೆಸಿದವರು ಕುವೆಂಪು ಅವರದ್ದು. ಕುವೆಂಪು ಅವರು ಪ್ರಕೃತಿ ಸಂಸ್ಕೃತಿ ಸೃಜನಶೀಲತೆಗಳ ಅನುಸಂಧಾನಗಳೊಂದಿಗೆ ಸಾಹಿತ್ಯದ ಬಹುತ್ವವನ್ನು ಸಾಧಿಸಿದ್ದಾರೆ. ಪ್ರಸಾರಂಗವನ್ನು ಬಹಳ ವಿಶೇಷವಾಗಿ ಕಟ್ಟಿ ಬೆಳೆಸಿದ್ದಾರೆ ಎಂದು ಬಣ್ಣಿಸಿದರು.
ಪ್ರಸಾರಾಂಗದ ಪ್ರಕಟಣಾ ಸಮಿತಿಯ ಅಧ್ಯಕ್ಷರಾಗಿ ನೂರಾರು ಮೌಲ್ಯಯುತ ಗ್ರಂಥಗಳನ್ನು ರಚಿಸಿದ್ದಾರೆ. ಕುವೆಂಪು ಅವರು ಕುಲಪತಿಯಾಗಿದ್ದಾಗ ಪ್ರಸಾರಾಂಗಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮೃದ್ಧವಾಗಿ ಬೆಳೆಸಿದರು. ಅವರು ಕಟ್ಟಿದ ಪ್ರಸಾರಾಂಗವು ವಿದ್ವಾಂಸರ , ಸಂಶೋಧಕರ ಹಾಗೂ ಓದುಗರ ಪರಂಪರೆಯನ್ನು ಬಹಳ ಸಮೃದ್ಧವಾಗಿ ಕಟ್ಟಿದೆ ಎಂದರು.
ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ, ಮೈಸೂರು ವಿವಿ ಕುಪಲತಿ ಪ್ರೊ.ಎನ್.ಕೆ.ಲೋಕನಾಥ್ ಅವರು ಪ್ರೊ.ಸಿ.ಪಿ.ಕೃಷ್ಣಕುಮಾರ್ ಅವರ ಪಂಪ ಪರೀಕ್ಷಣ ಹಾಗೂ ಗುರುಪಾದ ಹೆಗ್ಗಡೆ ಅವರ ಸಂಸ್ಕೃತ ವ್ಯಾಕರಣ ದೀಪಿಕ ಪುಸ್ತಕಗಳನ್ನು ಬಿಡುಗಡೆ ಮಾಡಿದರು.
ವಿದ್ವಾಂಸ ಡಾ.ಗುರುಪಾದ ಕೆ.ಹೆಗಡೆ, ಪ್ರಸಾರಾಂಗದ ಅಧೀಕ್ಷಕ ಎಂ.ಡಿ.ಚೆನ್ನಬಸಪ್ಪ, ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರದ ಸಂಶೋಧನಾ ಸಹಾಯಕಿ ಅನ್ನಪೂರ್ಣ ಇತರರು ಇದ್ದರು.
ಕುವೆಂಪು ಸಭಾಂಗಣದ ನಾಮಫಲಕ ಅನಾವರಣ
ಮೈಸೂರು: ಪ್ರಸಾರಾಂಗದಲ್ಲಿ ಕುವೆಂಪು ಸಭಾಂಗಣದ ನಾಮಫಲಕವನ್ನು ಅವರ ಪುತ್ರಿ ತಾರಿಣಿ ಚಿದಾನಂದಗೌಡ ಅನಾವರಣಗೊಳಿಸಿದರು.
ಪ್ರಸಾರಾಂಗದಲ್ಲಿ ಒಳ್ಳೆಯ ಕೃತಿಗಳು ಪ್ರಕಟವಾಗುತ್ತಿದ್ದವು. ಕೆಲವು ವರ್ಷ ಅದು ಸ್ಥಗಿತವಾದಂತಿತ್ತು. ಇದೀಗ ಚೆನ್ನಾಗಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಮರಳಿ ಹಳೆಯ ವೈಭವಕ್ಕೆ ಬರಲಿ ಎಂದು ಶುಭ ಹಾರೈಸಿದರು.
ಪ್ರಸಾರಾಂಗದ ಜತೆ ಕುವೆಂಪು ಅವರಿಗೆ ವಿಶೇಷವಾದ ನಂಟು ಹಾಗೂ ಅಭಿಮಾನವಿತ್ತು. ಕುಲಪತಿಯಾಗಿ ನಿವೃತ್ತಿಯಾದ ಮೇಲೆ ಕುವೆಂಪು ಅವರು ಪ್ರಸಾರಾಂಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪ್ರಭುಶಂಕರ ಅವರು ತಂದೆ ಅವರನ್ನು ಕರೆದೊಯ್ಯುತ್ತಿದ್ದರು. ಆಗಿನ ಒಂದೆರಡು ಘಟನೆಗಳು ನೆನಪಿನಲ್ಲಿ ಉಳಿದಿವೆ ಎಂದು ತಾರಿಣಿ ಸ್ಮರಿಸಿದರು.
ಉತ್ತಮ ಗುರು, ಶಿಷ್ಯರು
ಬಿಎಂಶ್ರೀ ಮತ್ತು ಕುವೆಂಪು ಉತ್ತಮ ಗುರು ಶಿಷ್ಯರಾಗಿದ್ದರು. ಬಿಎಂಶ್ರೀ ಒಮ್ಮೆ ಕುವೆಂಪು ಅವರನ್ನು ಕರೆದು ನಾಡನ್ನು ಸುತ್ತಿ ಕನ್ನಡ ಜಾಗೃತಿಯನ್ನು ಮೂಡಿಸೋಣ ಎಂದಿದ್ದರು. ಇದಕ್ಕೆ ಉತ್ತರಿಸಿದ ಕುವೆಂಪು ಅವರು ಆ ಕೆಲಸವನ್ನು ನೀವು ಮಾಡಿ. ನನ್ನದು ಕಾವ್ಯ ಕ್ಷೇತ್ರ. ಈ ಕ್ಷೇತ್ರದಲ್ಲಿಯೇ ಕೆಲಸ ಮಾಡುತ್ತೇನೆ ಎಂದಿದ್ದರು. ಒಟ್ಟಿನಲ್ಲಿ ಇಬ್ಬರಿಂದಲೂ ಕನ್ನಡಕ್ಕೆ ಉಪಕಾರ ಹಾಗೂ ಲಾಭವಾಯಿತು.
ಸಿ.ಪಿ.ಕೃಷ್ಣಕುಮಾರ್, ಹಿರಿಯ ಸಾಹಿತಿ