ಜಿಲ್ಲೆ

ಗ್ರಾಮೀಣ ಸೊಗಡು ನೆನಪಿಸಿದ ಹಳ್ಳಿ ಹಬ್ಬ

reportermys

ಹಾಸನ: ನಗರದ ಆರ್.ಸಿ.ರಸ್ತೆ ಗಂಧದಕೋಠಿಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ ವತಿಯಿಂದ ಗುರುವಾರ ಕಾಲೇಜಿನ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ‘ಹಳ್ಳಿಹಬ್ಬ’ ಕಾರ್ಯಕ್ರಮ ಗ್ರಾಮೀಣ ಸೊಗಡನ್ನು ಅನಾವರಣಗೊಳಿಸಿತು.

ಬಿಂದಿಗೆ ಹೊರುವ ಓಟ, ಮೂರು ಕಾಲು ಓಟ, ಕೆರೆ-ದಡ, ಹಗ್ಗಜಗ್ಗಾಟ, ಧಾನ್ಯ ವಿಂಗಡನೆ, ಸೋಬಾನೆ ಪದ, ಜಾನಪದ ಗೀತೆಗಳ ಗಾಯನ ಸ್ಪರ್ಧೆಗಳಲ್ಲಿ ವಿದ್ಯಾರ್ಥಿನಿಯರು ಅತ್ಯಾತ್ಸುಹದಿಂದ ಭಾಗವಹಿಸಿದರೆ ಉಳಿದವರು ಚಪ್ಪಾಳೆ, ಶಿಳ್ಳೆ ಹಾಕುವ ಮೂಲಕ ಸ್ಪರ್ಧಿಗಳನ್ನು ಹುರಿದುಂಬಿಸಿದರು.

ಪ್ರಸ್ತುತ ನಗರಪ್ರದೇಶದ ವಿದ್ಯಾರ್ಥಿಗಳಿಗೆ ಬಿಂದಿಗೆಯಲ್ಲಿ ನೀರು ಹೊರುವುದು ಅಭ್ಯಾಸವಿರುವುದಿಲ್ಲ. ಆದರೆ ಹಳ್ಳಿಹಬ್ಬದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳು, ಗ್ರಾಮೀಣ ಭಾಗದ ವಿದ್ಯಾರ್ಥಿಗಳೊಂದಿಗೆ ನೀರು ತುಂಬಿದ ಎರಡು ಬಿಂದಿಗೆಗಳನ್ನು ಹೊತ್ತು ಗುರಿ ತಲುಪಲು ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರೆ, ಕೆಲವರು ಬಿಂದಿಗೆ ಹೊರಲಾರದೆ ಬೀಳಿಸಿ ಮಧ್ಯದಲ್ಲೇ ಹೊರ ನಡೆದರು.

ಮೂರು ಕಾಲಿನ ಓಟದ ಸ್ಪರ್ಧೆಯಂತು ಮೈ ಜುಮ್ ಎನ್ನಿಸಿತು. ಇಬ್ಬರು ವಿದ್ಯಾರ್ಥಿಗಳು ತಮ್ಮ ಒಂದೊಂದು ಕಾಲನ್ನು ಕಟ್ಟಿ ಒಟ್ಟಿಗೆ ಹೆಜ್ಜೆ ಹಾಕಿ ಓಡಿದರೆ, ಕೆಲವರು ಓಡುವ ಭರದಲ್ಲಿ ಬಿದ್ದಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.

ವಿಶೇಷವಾಗಿ ಹಗ್ಗ ಜಗ್ಗಾಟ ಸ್ಪರ್ಧೆ ಆಯೋಜಿಸಲಾಗಿತ್ತು. ಹತ್ತಕ್ಕೂ ಹೆಚ್ಚು ತಂಡಗಳು ಉತ್ಸಾದಿಂದ ಭಾಗವಹಿಸಿದ್ದವು. ಎರಡೂ ಕಡೆಯ ವಿದ್ಯಾರ್ಥಿನಿಯರು ತಮ್ಮ ಬಲಾಬಲ ಸಾಬೀತು ಮಾಡಲು ಶಕ್ತಿ ಮೀರಿ ಪ್ರಯತ್ನಿಸಿದರು. ಹಗ್ಗವೇ ಎರಡು ಬಾರಿ ತುಂಡಾಗಿ ವಿದ್ಯಾರ್ಥಿನಿಯರು ನೆಲಕ್ಕುರುಳಿದರು.

ಸೋಬಾನೆ ಪದ, ಜಾನಪದ ಗೀತೆಗಳನ್ನು ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಹಾಡಿದರು. ಧಾನ್ಯ ವಿಂಗಡನೆ ಸ್ಪರ್ಧೆಯಲ್ಲಿ ಐದು ನಿಮಿಷದಲ್ಲಿ ಹತ್ತು ಬಗೆಯ ಕಾಳುಗಳನ್ನು ಬೇರ್ಪಡಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಕೆರೆ-ದಡ ಆಟದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಸಂತಸದಿಂದ ಭಾಗವಹಿಸಿ ಬಾಲ್ಯದ ನೆನಪು ಮೆಲುಕು ಹಾಕಲು ಅವಕಾಶ ಮಾಡಿಕೊಟ್ಟ ಕಾಲೇಜಿಗೆ ಧನ್ಯವಾದ ಹೇಳಿದರು.

‘ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಹಳ್ಳಿ ಆಟಗಳ ಬಗ್ಗೆ ಇಂದಿನ ಮಕ್ಕಳಿಗೆ ಅರಿವು ಇಲ್ಲದಂತಾಗಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಕ್ರೀಡೆಗಳನ್ನು ನೆನಪಿಸಿ, ಉಳಿಸಿ, ಉತ್ತೇಜನ ನೀಡಲು ಹಳ್ಳಿ ಹಬ್ಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,’’

  • ಡಾ. ಕೆ.ಜಿ. ಕವಿತಾ, ಪ್ರಾಂಶುಪಾಲೆ