ಕಡೂರು: ಗ್ರಾಮೀಣ ಭಾಗದಲ್ಲಿ ಸಮ್ಮೇಳನಗಳು ನಡೆದಾಗ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ ಎಂದು ಚಿಕ್ಕಬಾಸೂರು ಪ್ರಥಮ ಗ್ರಾಮ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಚಿಕ್ಕಬಾಸೂರು ಅನಂತು ತಿಳಿಸಿದರು.
ಚಿಕ್ಕಬಾಸೂರು ಗ್ರಾಮದಲ್ಲಿ ಸೋಮವಾರ ಕಸಾಪ ತಾಲೂಕು ಘಟಕದ ಪದಾಧಿಕಾರಿಗಳಿಂದ ಸಮ್ಮೇಳನದ ಆಹ್ವಾನ ಸ್ವೀಕರಿಸಿ ಮಾತನಾಡಿ, ಸಾಹಿತ್ಯ ಸಮ್ಮೇಳನ ಗ್ರಾಮದಲ್ಲಿ ಕನ್ನಡದ ಚಟುವಟಿಕೆಗಳು ಹೆಚ್ಚು ಸಕ್ರಿಯಗೊಳಿಸಲು ಸಹಕಾರಿಯಾಗುತ್ತದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಚಿಕ್ಕ ಬಾಸೂರು ಗ್ರಾಮದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ವಲ್ಮೀಕ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಅ.26ರಂದು ಏರ್ಪಡಿಸಿದ್ದು, ಸಮ್ಮೇಳನಕ್ಕೆ ಉದಯೋನ್ಮುಖ ಲೇಖಕ ಚಿಕ್ಕಬಾಸೂರು ಅನಂತು ಅವರ ಆಯ್ಕೆ ಹೆಚ್ಚು ಮಹತ್ವ ತಂದುಕೊಟ್ಟಿದೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ಸಿ.ಜಿ.ತಿಮ್ಮಯ್ಯ ಮಾತನಾಡಿ, ಗ್ರಾಮದಲ್ಲಿ ಪ್ರಥಮ ಬಾರಿಗೆ ಸಾಹಿತ್ಯ ಸಮ್ಮೇಳನ ಆಯೋಜನೆಗೊಂಡಿದೆ. ಇದನ್ನು ಗ್ರಾಮದ ಎಲ್ಲರೂ ಕೂಡಿ ಯಶಸ್ವಿಗೊಳಿಸುತ್ತಾರೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಎಸ್.ಪರಮೇಶ್ ಮಾತನಾಡಿ, ಸಮ್ಮೇಳನವನ್ನು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹಾಗೂ ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ಎರಡು ಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದರು. ರಘು ಸ್ಪರ್ಧಾತ್ಮಕ ಜಗತ್ತಿನ ಶಿಕ್ಷಣ ಮತ್ತು ಉದ್ಯೋಗ ವಿಷಯ ಕುರಿತಂತೆ ಪ್ರಬಂಧ ಮಂಡಿಸಲಿದ್ದಾರೆ. ಕೃಷಿಗೋಷ್ಠಿಯಲ್ಲಿ ಪ್ರಗತಿಪರ ರೈತ ಮನಸುಳಿ ಮೋಹನ್ ಮಾತನಾಡಲಿದ್ದಾರೆ. ಶಿಕ್ಷಣ ಮತ್ತು ಉದ್ಯೋಗ ಗೋಷ್ಠಿಯಲ್ಲಿ ಹರ್ಷಿಣಿ, ಜಾನಪದ ಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್ ಉಪನ್ಯಾಸ ನುಡಿಯಲಿದ್ದಾರೆ ಎಂದರು.
ತರೀಕೆರೆ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಕಿರಣ್ ಮತ್ತು ಹಾಸನ ಜಿಲ್ಲಾ ಕಸಾಪ ಅಧ್ಯಕ್ಷರು ವರ್ತಮಾನದಲ್ಲಿ ಜಾನಪದ ಕುರಿತು ಮಾತನಾಡಲಿದ್ದಾರೆ. ಕನ್ನಡಶ್ರೀ ಪ್ರಶಸ್ತಿಯನ್ನು ಸ್ವರ್ಣಾಂಬ ದೇವಾಲಯದ ಧರ್ಮದರ್ಶಿ ಡಾ. ಎಂ.ಟಿ.ಸತ್ಯನಾರಾಯಣ ಹಾಗೂ ಕವಿತಾ ಆನಂದ್, ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಸತೀಶ್ ಮತ್ತು ಸಿ.ಜಿ.ತಿಮ್ಮಯ್ಯ, ಗ್ರಾಮದ ವಿವಿಧ ಗಣ್ಯರ ಸಾಧನೆಯನ್ನು ಗುರುತಿಸಿ ಕನ್ನಡ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಜಾನಪದ ಬಾಲಾಜಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬಿ. ಪ್ರಕಾಶ್, ಗೌರವಾಧ್ಯಕ್ಷ ಎಂ.ರಾಜಪ್ಪ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಲತಾ ರಾಜಶೇಖರ್, ಕೋಶಾಧ್ಯಕ್ಷ ಎಚ್.ಕೆ.ಮಂಜುನಾಥ್, ಕೆ.ಜಿ.ರವಿಚಂದ್ರ, ವಸಂತಕುಮಾರ್, ಕೃಷ್ಣಮೂರ್ತಿ, ಗಿರೀಶ್, ಚಂದ್ರಶೇಖರಪ್ಪ ಕುಮಾರ, ಅನಂತು, ಬಾಸೂರು ಶ್ರೀನಿವಾಸ್, ಕಲ್ಲೇಶಪ್ಪ ಇತರರಿದ್ದರು.