ಚನ್ನಪಟ್ಟಣ: ಗ್ರಾಮೀಣ ಭಾಗದ ಸಮಸ್ಯೆಗಳ ಪರಿಹಾರಕ್ಕೆ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ. ಕು ಮಾರಸ್ವಾಮಿ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದ ವತಿಯಿಂದ ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಯಾರೇ ಮಾಡಲಿ ಒಳ್ಳೆಯ ಕಾರ್ಯಕ್ರಮಗಳನ್ನು ಮೆಚ್ಚಬೇಕು. ಇದರಿಂದ ಗ್ರಾಮೀಣ ಪ್ರದೇಶದ ಸಮಸ್ಯೆಗಳು ಬಗೆಹರಿಯಲು ಸಾಧ್ಯವಾಗಲಿದೆ. ಅಧಿಕಾರಿಗಳಿಗೂ ಜನರ ಸಮಸ್ಯೆಗಳು ಮನಮುಟ್ಟುತ್ತವೆ ಎಂದರು.
ಕಾನೂನು ವ್ಯಾಪ್ತಿಯಲ್ಲಿರುತ್ತದೆ ಕೋರ್ಟ್, ವ್ಯಾಜ್ಯಗಳನ್ನು ಹೊರತುಪಡಿಸಿ ಇತರ ಸಮಸ್ಯೆಗಳ ಇತ್ಯರ್ಥಕ್ಕೆ ಈ ಕಾರ್ಯಕ್ರಮ ಅನುಕೂಲವಾಗಿದೆ. ಬಡವರು ಅಲೆದಾಡುವುದು ತಪ್ಪಲಿದೆ. ಅಧಿಕಾರಿಗಳು ಪ್ರಾ ಮಾಣಿವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಆಗ ಮಾತ್ರ ಈ ಕಾರ್ಯಕ್ರಮ ಸಾರ್ಥಕತೆ ಪಡೆಯುತ್ತದೆ ಎಂದರು.
ಆನೆ ದಾಳಿ ದೊಡ್ಡ ಸಮಸ್ಯೆಯಾಗಿದೆ: ಚನ್ನಪಟ್ಟಣ ಹಾಗೂ ರಾಮಗರದದ ಕೆಲಭಾಗಗಳಲ್ಲಿ ಆನೆ ದಾಳಿ ಸಮಸ್ಯೆ ಸಾಕಷ್ಟು ತಲೆನೋವಾಗಿದೆ. ನಿರಂತರ ದಾಳಿಯಿಂದ ಬೆಳೆ ಹಾಗೂ ಪ್ರಾಣಹಾನಿ ವರದಿಯಾಗುತ್ತಿವೆ. ನನ್ನ ಅವಧಿಯಲ್ಲಿ 100 ಕೋಟಿ ರೂ. ಅನುದಾನದಲ್ಲಿ ಕಾಡು ಪ್ರಾಣಿಗಳಿಂದ ಬೆಳೆಹಾನಿ ರಕ್ಷಣೆಗೆ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಭಾಗದಲ್ಲೂ ಸಹ ಆನೆ ದಾಳಿ ತಡೆಯಲು ಹೊಸ ತಂತ್ರ ಬಳಸಲಾಗುತ್ತಿದೆ. 11 ಕಿ.ಮೀ. ಸೋಲಾರ್ ಬೇಲಿ ಕೆಲಸ, 62 ಕಿ.ಮೀ ತಡೆಗೋಡೆ ಕೆಲಸ ಪ್ರಗತಿಯಲ್ಲಿದೆ. ಪ್ರಾಣಿ ದಾಳಿಗೆ ಸಂಬಂಧಿಸಿ 2.46 ಕೋಟಿ ರೂ. ಪರಿಹಾರ ನೀಡುವ ಕೆಲಸ ಪ್ರಗತಿಯಲ್ಲಿದೆ ಎಂದು ಎಚ್‌ಡಿಕೆ ತಿಳಿಸಿದರು.
ಕಂದಾಯ ಇಲಾಖೆಯ ಖಾತೆ, ಪಹಣಿ, ಪೋಡಿಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ಬರುತ್ತವೆ. ಇವುಗಳನ್ನು ಅಧಿಕಾರಿಗಳು ಪರಿಹರಿಸಲು ಕ್ರಮ ವಹಿಸುತ್ತಾರೆ. ಇದರೊಂದಿಗೆ ಸಾರ್ವಜನಿಕರು ಸಹ ಆಸ್ತಿಗೆ ಸಂಬಂಧಿಸಿದಂತೆ ತಮ್ಮ ಕುಟುಂಬದಲ್ಲಿರುವ ವ್ಯಾಜ್ಯಗಳನ್ನು ಪರಿಹರಿಸಲು ತಾವೇ ಪ್ರಯತ್ನಿಸಬೇಕು ಎಂದು ಕರೆನೀಡಿದರು.
1700 ಅರ್ಜಿ ವಿಲೇವಾರಿ: ಜಿಲ್ಲಾಧಿಕಾರಿ ಡಾ ಕೆ. ರಾಕೇಶ್ ಕುಮಾರ್ ಮಾತನಾಡಿ, ಸಮಸ್ಯೆಗಳಿಗೆ ಜನರ ಎದುರಲ್ಲೇ ಪರಿಹಾರ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಹೆಚ್ಚಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಬರುತ್ತದೆ. ದೂರುಗಳನ್ನು ಸ್ವೀಕರಿಸಿ ಪರಿಹಾರ ಮತ್ತು ಸಲಹೆ ನೀಡುತ್ತೇವೆ ಎಂದರು. ಇದುವರೆಗೂ ನಡೆದಿರುವ 4 ಕಾರ್ಯಕ್ರಮದಲ್ಲಿ 2000 ಅರ್ಜಿಗಳು ಸ್ವೀಕರಿಸಿದ್ದು, ಇವುಗಳಲ್ಲಿ ಕಂದಾಯ ಹಾಗೂ ಇತರ ಇಲಾಖೆಯ 1700 ಅರ್ಜಿಗಳು ವಿಲೇವಾರಿಯಾಗಿವೆ. 300 ಅರ್ಜಿಗಳು ಬಗೆಹರಿಸುವ ಹಂತದಲ್ಲಿವೆ ಎಂದು ವಾಹಿತಿ ನೀಡಿದರು. ತಗಚಗೆರೆ ಸೇರಿ ಕೆಲವು ಗ್ರಾಮಗಳಲ್ಲಿ ಸ್ಮಶಾನದ ಅವಶ್ಯಕತೆ ಇದ್ದು, ಎನ್.ಆರ್. ಕಾಲನಿಯ ಹಕ್ಕುಪತ್ರ ವಿತರಣೆ ಕುರಿತು ಚರ್ಚಿಸಲಾಗಿದೆ. ಸರ್ಕಾರಿ ಜಮೀನು ಪರಿಶೀಲನೆ ನಡೆಸಿ ಸ್ಮಶಾನದ ಸ್ಥಳ ಗುರುತಿಸಲಾಗುವುದು. ಹೊಸ ಕಂದಾಯ ಗ್ರಾಮ ನಿರ್ವಾಣ ಕುರಿತು ಅರಿವು ಮೂಡಿಸಲಾಗುವುದು ಎಂದರು.
ಜಿಪಂ ಸಿಇಒ ಇಕ್ರಂ, ತಹಸೀಲ್ದಾರ್ ಎಲ್. ನಾಗೇಶ್, ತಾಪಂ ಇಒ ಚಂದ್ರು, ಉಪ ತಹಸೀಲ್ದಾರ್ ಲಕ್ಷ್ಮೀದೇವಿ, ಜಿಲ್ಲಾ ಅರಣ್ಯಧಿಕಾರಿ ದೇವರಾಜು, ತಗಚಗೆರೆ ಗ್ರಾಪಂ ಅಧ್ಯಕ್ಷೆ ನೇತ್ರಾ ನಾಗೇಂದ್ರ, ಉಪಾಧ್ಯಕ್ಷೆ ರಮ್ಯರಾಜು, ಕಂದಾಯ ನಿರೀಕ್ಷಕ ಯುವರಾಜ್, ವಿಎ ಶಿವು. ಗ್ರಾಪಂ ಪಿಡಿಒ ಶ್ವೇತಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.