ಜಿಲ್ಲೆ

ಗ್ರಾಮೀಣ ವಿದ್ಯಾರ್ಥಿಗಳು ಹಿಂಜರಿಕೆ ಮನೋಭಾವ ಬಿಡಿ

ಮಳವಳ್ಳಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳ ಸ್ಪರ್ಧೆ ಮಾಡಲು ಅಸಾಧ್ಯ ಎಂಬ ಹಿಂಜರಿಕೆ ಮನೋಭಾವ ಬಿಟ್ಟರೆ ಸಾಧನೆ ಸಾಧ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ ಕಿವಿಮಾತು ಹೇಳಿದರು.

ತಾಲೂಕಿನ ದಡದಪುರ ಗ್ರಾಮದ ಬಸವೇಶ್ವರ ದೇವಸ್ಥಾನದ ಬಳಿ ಸೋಮವಾರ ಬೆಂಗಳೂರಿನ ಆದಿ ಶಂಕರ ಫೌಂಡೇಷನ್ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಹಯೋಗದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಭೆಗೆ ಗ್ರಾಮೀಣ, ನಗರ ಎಂಬ ಯಾವುದೇ ತಾರತಮ್ಯ ಇರುವುದಿಲ್ಲ. ಎಲ್ಲ ಪ್ರದೇಶದ ಮಕ್ಕಳಲ್ಲೂ ಪ್ರತಿಭಾವಂತರೆ. ಶಿಸ್ತು, ಪರಿಶ್ರಮ, ಸಮಯ ಪ್ರಜ್ಞೆ ಬೆಳೆಸಿಕೊಳ್ಳುವ ಮೂಲಕ ಗುರಿ ಸಾಧಿಸಬೇಕೆಂದು ತಿಳಿಸಿದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎನ್.ಸುಬ್ರಹ್ಮಣ್ಯ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್, ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ವಿಶಾಲ್ ರಘು, ಫೌಂಡೇಷನ್ ಸಲಹಾ ಸಮಿತಿ ಅಧ್ಯಕ್ಷ ಡಾ.ಸಂಜೀವೇಗೌಡ, ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ಮಹೇಂದ್ರ, ಹೆಚ್ಚುವರಿ ನ್ಯಾಯಾಧೀಶೆ ಎಚ್.ಎಸ್.ಕಾವ್ಯಶ್ರೀ, ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್, ಕಾರ್ಯದರ್ಶಿ ನಟೇಶ್, ಎಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ಕೃಷ್ಣಪ್ಪ, ತಾಪಂ ಇಒ ಶ್ರೀನಿವಾಸ್, ಬಿಇಒ ಉಮಾ ಇತರರಿದ್ದರು.