ಹುಲಸೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶರಣರ ವಚನ ಗಾಯನ, ವಚನ ಭಾವಾರ್ಥ ಲೇಖನ, ಶರಣರ ಕುರಿತಾದ ರಸಪ್ರಶ್ನೆ, ರೂಪಕ -ನಾಟಕ ಸ್ಪರ್ಧೆ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸ್ವಾತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ಮಲ್ಲಮ್ಮ ಪಾಟೀಲ್ ಹೇಳಿದರು.
ಬಸವಕಲ್ಯಾಣದಲ್ಲಿ ನಡೆಯಲಿರುವ ೪೫ನೇ ಶರಣ ಕಮ್ಮಟ ಅನುಭವ ಮಂಟಪ ಉತ್ಸವ ನಿಮಿತ್ತ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯ ಹಾಳು ಮಾಡದೆ ಓದಿಗೆ ಹೆಚ್ಚು ಮಹತ್ವ ನೀಡಬೇಕು. ತಾವು ಸಂಪಾದಿಸಿರುವ ಆಸ್ತಿ, ಅಂತಸ್ತು ಕಸಿದುಕೊಳ್ಳಬಹುದು, ಆದರೆ ತಮ್ಮಲ್ಲಿರುವ ಜ್ಞಾನ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದರು.
ಪ್ರಾಸ್ತಾವಿಕ ಮಾತನಾಡಿದ ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಶಿವರಾಜ ಖಪಲೆ ಮಾತನಾಡಿ, ವಿದ್ಯಾರ್ಥಿಗಳು ಶರಣರ ವಚನಗಳ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕೆಂಬ ಉದ್ದೇಶದಿಂದ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಶ್ರೀ ಗುರುಬಸವ ಪಟ್ಟದ್ದೇವರು ವಿವಿಧ ಸ್ಪರ್ಧೆಗಳು ಏರ್ಪಡಿಸಿದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸೂರ್ಯಕಾಂತ ಅಡಕೆ, ಬಸವಕುಮಾರ ಕೌಟೆ ಮಾತನಾಡಿದರು. ಸೂರ್ಯಕಾಂತ ಪಾಟೀಲ್, ದೇವಾನಂದ ನಂಜವಾಡೆ, ಸಚಿನ ಕೌಟೆ, ಲೊಕೇಶ ಧಬಾಲೆ, ರಾಜಕುಮಾರ ತೊಂಡಾರೆ, ಶಿಕ್ಷಕಿ ಮಲ್ಲಮ್ಮ ಇತರರಿದ್ದರು.