ಮೇಲುಕೋಟೆ: ನೀಟ್ ತರಬೇತಿ ಆರಂಭಿಸುವ ಮೂಲಕ ಎಸ್‌ಇಟಿ ಪಾಲಿಟೆಕ್ನಿಕ್ ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಪೂರಕ ವಾತಾವರಣ ಕಲ್ಪಿಸಿದೆ ಎಂದು ಲೇಖಕ ಕೆ. ಕಾಳೇಗೌಡ ಪ್ರಶಂಸೆ ವ್ಯಕ್ತಪಡಿಸಿದರು.
ಇಲ್ಲಿನ ಎಸ್‌ಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಚಟುವಟಿಕೆಗಳ ಕಾರ್ಯಾಗಾರ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಮಕ್ಕಳೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಬೇಕೆಂಬ ಕಾರಣಕ್ಕೆ ನೀಟ್ ತರಬೇತಿ ಆರಂಭಿಸಲಾಗಿದೆ. ಪಾಲಕರು ಈ ಸದವಕಾಶವನ್ನು ಬಳಸಿಕೊಳ್ಳಬೇಕು ಎಂದೂ ಕಾಳೇಗೌಡ ಕರೆನೀಡಿದರು.
ಇದೇ ಸಂದರ್ಭದಲ್ಲಿ ಸಿಇಟಿ ಮತ್ತು ನೀಟ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. 2022-23ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್‌ಇಟಿ ಶಿಕ್ಷಣ ಸಂಸ್ಥೆಯ ರಿಜಿಸ್ಟ್ರಾರ್ ನಿಂಗೇಗೌಡ, ರಾಜ್ಯ ಪ್ರಶಸ್ತಿ ವಿಜೇತ ವಿ.ವೆಂಕಟರಾಮೇಗೌಡ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎನ್.ಬಿ ಶಿವಕುಮಾರ್, ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಅರವಿಂದ್, ಬಾಲಕಿಯರ ವಸತಿ ನಿಲಯದ ನಿಲಯಪಾಲಕಿ ನಾಗರತ್ನಾ ಇತರರಿದ್ದರು.