ಚಿಕ್ಕಮಗಳೂರು: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸರ್ಕಾರ ೨೫ ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರತೀ ಕ್ಷೇತ್ರಕ್ಕೆ ಗ್ರಾಮಾಂತರ ಭಾಗದ ರಸ್ತೆಗಳ ಅಭಿವೃದ್ಧಿಗೆ ೧೫ ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ಹೊರವಲಯದ ಹಿರೇಕೊಳಲೆ ಗ್ರಾಮದಲ್ಲಿ ಸುಮಾರು ೨೦ ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಪ್ರತಿ ಪಂಚಾಯಿತಿಗೆ ೨೫ ರಿಂದ ೩೦ ಲಕ್ಷ ರೂ. ಅನುದಾನವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಮೀಸಲಿಡಲಾಗಿದೆ. ಸರ್ಕಾರ ಬಂದ ಒಂದೂವರೆ ವರ್ಷಗಳ ನಂತರ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದು, ಇದಕ್ಕೂ ಮೊದಲು ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.
ಹೊಸಪುರ ರಸ್ತೆಗೆ ೫೦ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಸಧ್ಯದಲ್ಲೇ ಉದ್ಘಾಟನೆಗೆ ಸಿದ್ದಗೊಂಡಿದೆ. ಜಾತಿ ಆಧಾರಿತ ಮಾಡದೆ ಪಕ್ಷಾತೀತವಾಗಿ ಸರ್ವ ಜನಾಂಗದವರ ಅಭಿವೃದ್ಧಿಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಟ್ಟುಗೂಡಿ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕ್ಷೇತ್ರದ ಜನತೆಗೆ ಒಳ್ಳೆಯ ಆರೋಗ್ಯ ಕಲ್ಪಿಸಲು ಇನ್ನು ಎರಡು ವರ್ಷದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಾರ್ವಜನಿಕ ಸಮರ್ಪಣೆಯಾಗಲಿದೆ. ದೀನದಲಿತರ, ಬಡವರ ಪರವಾಗಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೆಲಸ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಎಲ್ಲರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಹಿರೇಕೊಳಲೆ ಗ್ರಾಪಂ ಅಧ್ಯಕ್ಷೆ ಕವಿತಾ ಸುನಿಲ್‌ಕುಮಾರ್, ಎಪಿಎಂಸಿ ಸಂಸ್ಕರಣಾ ಘಟಕದ ಅಧ್ಯಕ್ಷ ಬಿ.ಎಚ್. ಹರೀಶ್, ಬೆಟ್ಟೆಗೆರೆ ಪ್ರವೀಣ್, ಪ್ರಕಾಶ್, ಬೀಕನಹಳ್ಳಿ ನಾಗಭೂಷಣ್, ಜಯರಾಮ್, ಶಿವಕುಮಾರ್, ಪ್ರಕಾಶ್, ಪ್ರವೀಣ್, ವಸಂತ ಮತ್ತಿತರರು ಉಪಸ್ಥಿತರಿದ್ದರು.