ಮಳವಳ್ಳಿ: ಸುತ್ತೂರು ಮಠದ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳು ಅಂದಿನ ಕಷ್ಟದ ದಿನಗಳಲ್ಲೇ ಗ್ರಾಮೀಣ ಜನರ ಒಳಿತಿಗಾಗಿ ಶಿಕ್ಷಣ, ಆರೋಗ್ಯ, ಆಧ್ಯಾತ್ಮಿಕ ಸಂಸ್ಥೆಗಳನ್ನು ತೆರೆದಿದ್ದರ ಫಲವಾಗಿ ಇಂದು ಆ ಸಂಸ್ಥೆಗಳು ಲಕ್ಷಾಂತರ ಜನರ ಬದುಕಿಗೆ ದಾರಿ ದೀಪವಾಗಿವೆ ಎಂದು ಬಿ.ಜಿ.ಪುರ ಹೊರಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ವೀರರಾಜಪುರ ಗ್ರಾಮದಲ್ಲಿರುವ ಜೆಎಸ್‌ಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜು, ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಬುಧವಾರ ರಾಜೇಂದ್ರ ಶ್ರೀಗಳ 110ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜೇಂದ್ರ ಶ್ರೀಗಳು ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂದು ಹಠ ಯೋಗಿಯಂತೆ ಭಕ್ತರಿಂದ ದೇಣಿಗೆ ಸಂಗ್ರಹಿಸಿ ಹಳ್ಳಿ, ಹಳ್ಳಿಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದರು. ಆ ಶಾಲೆಗಳಲ್ಲಿ ಕಲಿತವರು ಇಂದು ಸಮಾಜದಲ್ಲಿ ಉತ್ತಮ ಸ್ಥಾನ ಪಡೆದಿದ್ದಾರೆ ಎಂದರು.
ಬದಲಾದ ಕಾಲಘಟ್ಟದಲ್ಲಿ ಶ್ರೀ ಮಠದ ಸೇವಾ ಕಾರ್ಯವನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮುಂದುವರಿಸಿದ್ದಾರೆ. ಜೆಎಸ್‌ಎಸ್ ಸಂಸ್ಥೆ ಶಿಕ್ಷಣದ ಜತೆಗೆ ಆರೋಗ್ಯ, ಅಧ್ಯಾತ್ಮ ಸೇರಿದಂತೆ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ದೇಶ ವಿದೇಶಗಳಲ್ಲೂ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಹಸ್ರಾರು ಜನರಿಗೆ ಉದ್ಯೋಗವನ್ನು ನೀಡಿದೆ ಎಂದು ಹೇಳಿದರು.
ಮಿಕ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಾ ನಾಗರಾಜು, ಮೈಸೂರಿನ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎಚ್.ಬಿ.ಶ್ರೀಧರ, ಉದ್ಯಮಿ ಶಂಭುಲಿಂಗೇಗೌಡ, ಮುಖ್ಯ ಶಿಕ್ಷಕ ಬಿ.ರಾಜೇಂದ್ರ, ಶಿಕ್ಷಕ ವಿವೇಕಾನಂದ ಇದ್ದರು.