ಹೂವಿನಹಡಗಲಿ: ಶಿಕ್ಷಕರು ರಾಷ್ಟ್ರ ಕಟ್ಟುವಂತಹ ಶಕ್ತಿ ಹೊಂದುವ ವಿದ್ಯಾರ್ಥಿ ಸಮೂಹವನ್ನು ಸೃಷ್ಟಿಸುವ ಶಿಲ್ಪಿಗಳಾಗಿದ್ದಾರೆ ಎಂದು ಉಪ ಪ್ರಾಂಶುಪಾಲರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೋರಿ ಹಾಲೇಶ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದಿಂದ ಆಯೋಜಿಸಿದ್ದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಬಾಲ್ಯದಲ್ಲಿ ಅನೇಕ ಸಂಕಷ್ಟಗಳ ನಡುವೆ ಓದಿ ಸಾಧನೆ ಮಾಡಿದ ವಿಜ್ಞಾನಿಗಳು, ಚಿಂತಕರ ಯಶೋಗಾಥೆ ನಮಗೆ ಸ್ಫೂರ್ತಿಯಾಗಿದೆ. ಗ್ರಾಮೀಣ ಭಾಗದ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದು ಅವರ ಕಲಿಕಾ ಮಟ್ಟ ಸುಧಾರಿಸಲು ಶಿಕ್ಷಕರು ಶ್ರಮಿಸಬೇಕಾಗಿದೆ. ತಾಲೂಕಿನ ಮಕ್ಕಳ ಶ್ರೇಯಸ್ಸಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಶಿಕ್ಷಕರನ್ನು ಗುರುತಿಸುವ ಕೆಲಸ ಮಹತ್ತರವಾಗಿದೆ ಎಂದರು.
ಶಿಕ್ಷಕರಾದ ಸರೋಜಮ್ಮ ಎಂ., ಸಣ್ಣಲಕ್ಕಪ್ಪ ಎಂ., ಉಪನ್ಯಾಸಕ ನಟರಾಜ್ ಪಾಟೀಲ್, ಗ್ರಂಥಾಲಯ ವಿಭಾಗದ ಕೆ.ಬಿ.ಬಸವರಾಜ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಗದ ಅಧ್ಯಕ್ಷ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ.ಕೊಟ್ರಗೌಡ, ದೈಹಿಕ ಪರಿವೀಕ್ಷಕ ರಫಿ ಅಹಮದ್ ಖವಾಸ್, ಶಾಖಾ ಗ್ರಂಥಾಲಯಾಧಿಕಾರಿ ಬಿ.ನಾರಾಯಣ್ ದಾಸ್, ಗ್ರಂಥಾಲಯ ಮೇಲ್ವಿಚಾರಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಕುರಿ, ನಿವೃತ್ತ ಉಪ ಪ್ರಾಂಶುಪಾಲ ಪಿ.ಪ್ರಕಾಶ್, ಬಳಗದ ಸದಸ್ಯರಾದ ಎಂ.ದಯಾನಂದ, ಶಂಕರ್ ಬೆಟಗೇರಿ, ನಾಗರಾಜ್ ಮಲ್ಕಿಒಡೆಯರ್, ವಿಶ್ವನಾಥ್ ಚಿಂಚಿ, ಕೆ.ದೊಡ್ಡಬಸಪ್ಪ ಇತರರಿದ್ದರು.