ಆನೇಕಲ್: ಗ್ರಾಮೀಣ ಭಾಗವನ್ನು ಕರೊನಾಮುಕ್ತವಾಗಿ ಮಾಡುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು.
ತಾಲೂಕಿನ ಜಿಗಣಿ, ಹಾರಗದ್ದೆ ಹಾಗೂ ಇಂಡ್ಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶನಿವಾರ ಭೇಟಿ ನೀಡಿ, ವೈದ್ಯರೊಂದಿಗೆ ಚರ್ಚಿಸಿ ನಂತರ ಮಾತನಾಡಿದರು,
ಬೆಂಗಳೂರಿನಲ್ಲಿ ಕರೊನಾ ಸೋಂಕು ಇಳಿಮುಖವಾಗುತ್ತಿದೆ. ಆದರೆ ಹಳ್ಳಿಗಳಲ್ಲಿ ಹೆಚ್ಚಾಗುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಚರ್ಚೆ ಮಾಡಿ, ಕ್ರಮಮದ ಬಗ್ಗೆ ಚರ್ಚಿಸಲಾಗುತ್ತಿದೆ ಎಂದರು.
ಜಿಗಣಿ, ಹಾರಗದ್ದೆ ಭಾಗಗಳಲ್ಲಿ ಹೊರರಾಜ್ಯ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಸೋಂಕು ಹೆಚ್ಚಳವಾಗುವ ಸಾಧ್ಯತೆ ಇದೆ. ಜತೆಗೆ ಸ್ಥಳೀಯ ಪಂಚಾಯಿತಿ ಹಾಗೂ ಪುರಸಭೆಯ ಜನಪ್ರತಿನಿಧಿಗಳ ಸಹಾಯ ಪಡೆದು ಕಲ್ಯಾಣ ಮಂಟಪ, ಸಮುದಾಯ ಭವನ, ಹಾಸ್ಟೆಲ್ ಗುರುತಿಸಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಮಾಡಿದರೆ ಕರೊನಾ ಹರಡುವಿಕೆ ತಡೆಯಬಹುದು ಎಂದರು.
ವೈದ್ಯರು, ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಆಡಳಿತ ಅರಿವು ಮೂಡಿಸುತ್ತಿದ್ದು, ಜನರನ್ನು ಮತ್ತಷ್ಟು ಜಾಗರೂಕತರನ್ನಾಗಿ ಮಾಡಲು ಆಟೋ ಮೂಲಕ ಪ್ರಚಾರ ಮಾಡಿ, ಗ್ರಾಮಗಳನ್ನು ಕೋವಿಡ್ ಮುಕ್ತವಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ಹಾರಗದ್ದೆ ವಿಎಸ್‌ಎಸ್‌ಎನ್ ಅಧ್ಯಕ್ಷ ಪ್ರಭಾಕರ್ ಬಾಬು ಮಾತನಾಡಿ, ಹಾರಗದ್ದೆಯಲ್ಲಿ ಗ್ರಾಪಂನಿಂದ ಬರುವ ಅನುದಾನವನ್ನು ಈ ಬಾರಿ ಸಂಪೂರ್ಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿ, ಜನರ ಆರೋಗ್ಯ ಕಾಯುವ ನಿಟ್ಟಿನಲ್ಲಿ ಹಾರಗದ್ದೆ ಮುಖ್ಯ ವೈದ್ಯಾಧಿಕಾರಿ ಹಾಗೂ ಅವರ ತಂಡದ ಜತೆ ಚರ್ಚೆ ನಡೆಸಿದ್ದೇವೆ ಎಂದ ಅವರು, ಆರೋಗ್ಯಪ್ರಾಥಮಿಕ ಕೇಂದ್ರದಲ್ಲಿ ನುರಿತ ವೈದ್ಯರು ಇನ್ನಷ್ಟು ಸಿಬ್ಬಂದಿ ನೇಮಕ ಹಾಗೂ ಔಷಧ ಸರಬರಾಜು ಮಾಡುವಂತೆ ಮನವಿ ಮಾಡಿದರು.
ಗ್ರಾಮ ಮಾಜಿ ಅಧ್ಯಕ್ಷ ನಟರಾಜು ಮಾತನಾಡಿ, ಎಲ್ಲರೂ ಕೂಡ ಜಿಲ್ಲಾಧಿಕಾರಿ ಜತೆ ಕೈಜೋಡಿಸಿ ಹಾರಗದ್ದೆ ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಎಲ್ಲರೂ ಸೇರಿ ವ್ಯವಸ್ಥೆ ಮಾಡುತ್ತೇವೆ ಎಂದರು.
ತಹಸೀಲ್ದಾರ್ ದಿನೇಶ್, ತಾಪಂ ಇಒ ಲಕ್ಷ್ಮೀನಾರಾಯಣ್, ಲ್ಯಾಬ್ ಟೆಕ್ನಿಷಿಯನ್ ಪ್ರೇಮಾ ಕುಮಾರಿ, ಜಿಗಣಿ ಆರ್‌ಐ ಮೋಹನ್, ಪಿಡಿಒ ಲಕ್ಷ್ಮೀನಾರಾಯಣ್ ಹಾಜರಿದ್ದರು.