ಭಾಲ್ಕಿ: ಗ್ರಾಮೀಣ ಭಾಗದಲ್ಲಿ ಶಿವಯೋಗೀಶ್ವರ ಸ್ವಾಮೀಜಿ ಅವರು ಧರ್ಮ, ಆಧ್ಯಾತ್ಮಿಕ ಪ್ರಚಾರದ ಜತೆಗೆ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆಗೈಯುತ್ತಿದ್ದಾರೆ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.
ಭಾತಂಬ್ರಾ ಗ್ರಾಮದ ಜಗದ್ಗುರು ನಿರಂಜನ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಹಾನಗಲ್ ಶ್ರೀ ಗುರುಕುಮಾರ ಶಿವಯೋಗಿಗಳ ೯೫ನೇ ಪುಣ್ಯಸ್ಮರಣೆ ಸಮಾರೋಪ, ಗುರುವಂದನೆ ಮತ್ತು ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ ಅವರ ೮೦ನೇ ಜನ್ಮದಿನದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಯೋಗೀಶ್ವರ ಸ್ವಾಮೀಜಿ ತಮ್ಮ ಇಡೀ ಬದುಕು ಸಮಾಜ ಸೇವೆಗೆ ಸಮರ್ಪಣೆ ಮಾಡಿಕೊಂಡಿದ್ದಾರೆ. ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ವಿವಿಧ ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ತೆರೆದು ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಮತ್ತು ಸಂಸ್ಕಾರ ಕಲ್ಪಿಸಿ ಕೊಡುತ್ತಿರುವುದು ಹೆಮ್ಮೆ ತರಿಸಿದೆ. ಅವರ ಸೇವೆ ಹೀಗೆ ಮುಂದುವರೆಯಲಿ. ಭಕ್ತರ ಮೇಲೆ ಅವರ ಆಶೀರ್ವಾದ ಸದಾ ಇರಲಿ ಎಂದು ಆಶಿಸಿದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ನಿರಂಜನ ಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ವೀರಶೈವ ಧರ್ಮವನ್ನು ಅಭಿವೃದ್ಧಿಪಡಿಸಲು ಹಾನಗಲ್ ಕುಮಾರ ಶಿವಯೋಗಿಗಳು ೧೯೦೪ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿ ಸಮಾಜವನ್ನು ಜಾಗೃತ ಗೊಳಿಸಿದ್ದಾರೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಉದಭೋದ ನವನೀತ ಗ್ರಂಥ ಬಿಡುಗಡೆ ಮಾಡಿದರು. ಶ್ರೀ ಡಾ.ಗುರುಬಸವ ದೇವರು ಸಮ್ಮುಖ ವಹಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ವೀರಣ್ಣ ಕಾರಬಾರಿ, ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಸೋಮನಾಥಪ್ಪ ಅಷ್ಟೂರೆ, ನಿರ್ದೇಶಕ ಕಾಶಿನಾಥ ಲದ್ದೆ, ಗ್ರಾಪಂ ಅಧ್ಯಕ್ಷ ಮಹಾಂತೇಶ ಪಾಟೀಲ್ , ಉಪಾಧ್ಯಕ್ಷೆ ಗೋದಾವರಿ ಬೀರಗೆ, ಪ್ರಮುಖರಾದ ಶಂಕರರಾವ ದಾಡಗೆ, ಮಹಾದೇವ ಬೇಲೂರೆ, ವಿಜಯಕುಮಾರ ಭೂರಾಳೆ ಇತರರಿದ್ದರು.
ನ್ಯಾಯವಾದಿ ಶ್ರೀಕಾಂತ ಭೂರಾಳೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಣೆ ಮಾಡಿದರು. ಶಿವಕುಮಾರ ಟೆಂಕಾಳೆ ವಂದಿಸಿದರು.
ಭವ್ಯ ಮೆರವಣಿಗೆ, ರಥೋತ್ಸವ: ನಮ್ಮೂರ ಹಬ್ಬದ ಪ್ರಯುಕ್ತವಾಗಿ ಹಳೇ ಮಠದಿಂದ ಜಗದ್ಗುರು ನಿರಂಜನ ಸಂಸ್ಥಾನ ಮಠದವರೆಗೆ ಪಲ್ಲಕ್ಕಿ ಉತ್ಸವ, ಕುಮಾರೇಶ್ವರ ಭಾವಚಿತ್ರ ಹಾಗೂ ವಚನ ಸಾಹಿತ್ಯದ ಭವ್ಯ ಮೆರವಣಿಗೆ ನೆರವೇರಿತು. ಮೆರವಣಿಗೆಯಲ್ಲಿ ಹಲವು ಕಲಾತಂಡಗಳು ಭಾಗವಹಿಸಿ ಮೆರಗು ಹೆಚ್ಚಿಸಿದವು. ಸಂಜೆ ೬ಕ್ಕೆ ಮುಹಿಳೆಯರು ಹಾನಗಲ್ಲ ಕುಮಾರೇಶ್ವರ ರಥವನ್ನು ಎಳೆಯುವುದರ ಮೂಲಕ ಮೂರು ದಿನದ ಎಲ್ಲ ಕಾರ್ಯಕ್ರಮಗಳು ತೆರೆಕಂಡವು.
ಹಾನಗಲ್ ಗುರುಕುಮಾರ ಶಿವಯೋಗಿಗಳು ಧರ್ಮ ಪ್ರಚಾರ ಪ್ರಸಾರದ ಜತೆಗೆ ಸಾಹಿತ್ಯ, ಸಂಗೀತ ಕ್ಷೇತ್ರದ ಮೂಲಕ ಈ ನಾಡಿಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಅವರ ತತ್ವಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಸಾರ್ಥಕ ಬದುಕು ಸಾಗಿಸಬೇಕು.
| ಜಗದ್ಗುರು ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಭಾತಂಬ್ರಾ